ADVERTISEMENT

ಕಾವೇರಿ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 11:59 IST
Last Updated 12 ಸೆಪ್ಟೆಂಬರ್ 2023, 11:59 IST
<div class="paragraphs"><p>&nbsp;ಕಾವೇರಿ ನದಿ&nbsp;</p></div>

 ಕಾವೇರಿ ನದಿ 

   

ನವದೆಹಲಿ: ಕರ್ನಾಟಕದಿಂದ ತಮಿಳುನಾಡಿಗೆ ಸೆ. 13ರಿಂದ ಹದಿನೈದು ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ನಷ್ಟು (ಅರ್ಧ ಟಿಎಂಸಿ ಅಡಿ) ನೀರನ್ನು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಮಂಗಳವಾರ ಶಿಫಾರಸು ಮಾಡಿದೆ. 

ಸಮಿತಿಯ ಅಧ್ಯಕ್ಷ ವಿನೀತ್‌ ಗುಪ್ತ ಅಧ್ಯಕ್ಷತೆಯಲ್ಲಿ ವರ್ಚುವಲ್‌ ಮೂಲಕ ನಡೆದ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು. ಸಮಿತಿಯ ಶಿಫಾರಸಿನಂತೆ ಕರ್ನಾಟಕ ನಡೆದುಕೊಂಡರೆ ಹದಿನೈದು ದಿನಗಳಲ್ಲಿ 7 ಟಿಎಂಸಿ ಅಡಿಯಷ್ಟು ನೀರನ್ನು ತಮಿಳುನಾಡಿಗೆ ಬಿಡಬೇಕಾಗುತ್ತದೆ. 

ADVERTISEMENT

ತಮಿಳುನಾಡಿಗೆ ನೀರು ಬಿಡಲು ಕರ್ನಾಟಕ ಸುತಾರಾಂ ಒಪ್ಪಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆ ಬುಧವಾರ ನಿಗದಿಯಾಗಿದ್ದು, ನೀರು ಬಿಡುಗಡೆ ಸಂಬಂಧ ಪ್ರಾಧಿಕಾರ ಅಂತಿಮ ಆದೇಶ ಹೊರಡಿಸಲಿದೆ. 

ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 12ರವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಮಾಡುವಂತೆ ಕರ್ನಾಟಕಕ್ಕೆ ಪ್ರಾಧಿಕಾರ ನಿರ್ದೇಶನ ನೀಡಿತ್ತು. ಆ ಪ್ರಕಾರ, ರಾಜ್ಯ ನೀರು ಬಿಡುಗಡೆ ಮಾಡಿತ್ತು. ಜತೆಗೆ, ಆದೇಶವನ್ನು ಪುನರ್‌ ಪರಿಶೀಲನೆ ಮಾಡುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿತ್ತು.‌

ಮಂಗಳವಾರದ ಸಭೆಯ ಆರಂಭದಲ್ಲೇ ಕರ್ನಾಟಕದ ಅಧಿಕಾರಿಗಳು, ‘ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಂಭೀರ ಬರದ ಸ್ಥಿತಿ ಇದೆ. ಸಂಕಷ್ಟದ ಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸಲಾಗಿದೆ. ರಾಜ್ಯದಲ್ಲಿ ಮುಂಗಾರು ಮುಕ್ತಾಯದ ಹಂತದಲ್ಲಿದೆ. ತಮಿಳುನಾಡಿನಲ್ಲಿ ಮುಂಗಾರು ವೇಗ ಪಡೆದುಕೊಂಡಿದೆ. ಅದರ ಸಂಪೂರ್ಣ ಲಾಭ ಆ ರಾಜ್ಯಕ್ಕೆ ಸಿಗಲಿದೆ. ಹೀಗಾಗಿ, ಇನ್ನು ಮುಂದೆ ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವೇ ಇಲ್ಲ’ ಎಂದು ವಾದಿಸಿದರು. 

ಆಗ ತಮಿಳುನಾಡಿನ ಅಧಿಕಾರಿಗಳು, ‘ಕಾವೇರಿ ನೀರು ನ್ಯಾಯಮಂಡಳಿಯ ಆದೇಶದ ಪ್ರಕಾರ, ಕರ್ನಾಟಕವು ಜೂನ್‌ನಿಂದ ಇಲ್ಲಿಯವರೆಗೆ 90 ಟಿಎಂಸಿ ಅಡಿಯಷ್ಟು ನೀರು ಹರಿಸಬೇಕಿತ್ತು. ಆದರೆ, ಈವರೆಗೆ ಬಿಡುಗಡೆ ಮಾಡಿರುವುದು 43 ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ. ಈ ಮೂಲಕ ನ್ಯಾಯಮಂಡಳಿಯ ಆದೇಶವನ್ನು ಉಲ್ಲಂಘಿಸಿದೆ’ ಎಂದು ದೂರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಅಧಿಕಾರಿಗಳು, ‘ರಾಜ್ಯದ ನಾಲ್ಕು ಜಲಾಶಯಗಳಿಗೆ ಜೂನ್‌ನಿಂದ ಇಲ್ಲಿಯವರೆಗೆ 105 ಟಿಎಂಸಿ ಅಡಿಯಷ್ಟು ನೀರು ಬಂದಿದೆ. 73 ಟಿಎಂಸಿ ಅಡಿಯಷ್ಟು ನೀರು ಜಲಾಶಯಗಳಿಂದ ಹರಿದು ಹೋಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಾಲ್ಕು ಜಲಾಶಯಗಳಲ್ಲಿ 113 ಟಿಎಂಸಿ ಅಡಿಯಷ್ಟು ನೀರು ಇತ್ತು. ಈಗ 63 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬರದ ತೀವ್ರತೆ ಹೆಚ್ಚುತ್ತಿದೆ. ಕುಡಿಯುವ ನೀರು ಹಾಗೂ ನೀರಾವರಿಯ ಅಗತ್ಯ ಪೂರೈಸಲು ಕಷ್ಟದ ಸನ್ನಿವೇಶ ಇದೆ. ಒಳಹರಿವು ಸುಧಾರಿಸದ ಹೊರತು ಕರ್ನಾಟಕವು ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ’ ಎಂದು ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. 

ಪ್ರತಿದಿನ 12,500 ಕ್ಯೂಸೆಕ್‌ನಂತೆ (ಹಿಂದಿನ ಬಾಕಿ 6,500 ಕ್ಯೂಸೆಕ್‌ ಸೇರಿ) 15 ದಿನಗಳ ಕಾಲ ನೀರು ಹರಿಸಬೇಕು ಎಂದು ತಮಿಳುನಾಡು ಅಧಿಕಾರಿಗಳು ‍ಪಟ್ಟು ಹಿಡಿದರು. ಅಂತಿಮವಾಗಿ ಸಮಿತಿಯು, ಬಿಳಿಗುಂಡ್ಲು ನೀರು ಮಾಪನ ಕೇಂದ್ರದಲ್ಲಿ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರಿನ ಹರಿವನ್ನು ಖಚಿತಪಡಿಸಲು ಶಿಫಾರಸು ಮಾಡಿತು.

ಇಂದು ತುರ್ತುಸಭೆ

ಬೆಂಗಳೂರು: ತಮಿಳುನಾಡಿಗೆ ಮತ್ತೆ ನೀರು ಬಿಡಲು ಪ್ರಾಧಿಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ವಿಶೇಷ ತುರ್ತುಸಭೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.