ADVERTISEMENT

ನ. 23ರವರೆಗೆ ತ.ನಾಡಿಗೆ ಪ್ರತಿದಿನ 2,600 ಕ್ಯೂಸೆಕ್‌ ನೀರು: ಪ್ರಾಧಿಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 15:48 IST
Last Updated 3 ನವೆಂಬರ್ 2023, 15:48 IST
<div class="paragraphs"><p>ಕಾವೇರಿ</p></div>

ಕಾವೇರಿ

   

ನವದೆಹಲಿ: ಕರ್ನಾಟಕವು ತಮಿಳುನಾಡಿಗೆ ಇದೇ 23ರವರೆಗೆ ಪ್ರತಿದಿನ 2,600 ಕ್ಯೂಸೆಕ್‌ ಕಾವೇರಿ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ಆದೇಶಿಸಿದೆ. ಈ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಎತ್ತಿ ಹಿಡಿದಿದೆ.

ತಮಿಳುನಾಡಿಗೆ ನವೆಂಬರ್ 15ರವರೆಗೆ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿತ್ತು. ಪ್ರಾಧಿಕಾರದ ಸಭೆಯ ಆರಂಭದಲ್ಲೇ ಕರ್ನಾಟಕದ ಅಧಿಕಾರಿಗಳು, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಒಳಹರಿವು ಶೂನ್ಯವಾಗಿದೆ. ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ತಮಿಳುನಾಡಿನ ಅಧಿಕಾರಿಗಳು, ‘ಕರ್ನಾಟಕ ಸರ್ಕಾರವು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದೆ. ಸಂಕಷ್ಟದ ಸೂತ್ರದಡಿ 15 ಟಿಎಂಸಿ ಅಡಿಯಷ್ಟು ಹಿಂಬಾಕಿ ನೀರು ಸಹ ಹರಿಸಬೇಕು. ಪ್ರತಿದಿನ 13 ಸಾವಿರ ಕ್ಯೂಸೆಕ್‌ ಹರಿಸಲು ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು. 

ADVERTISEMENT

‘ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ ಈ ಎಲ್ಲ ಸಮಸ್ಯೆ ಪರಿಹಾರ ಆಗಲಿದೆ. ಆದರೆ, ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಯ ಚರ್ಚೆಯೇ ಆಗುತ್ತಿಲ್ಲ. ಸಭೆಯ ಕಾರ್ಯಸೂಚಿಯಲ್ಲಿ ವಿಷಯ ಸೇರ್ಪಡೆ ಮಾಡಿ ಯೋಜನೆಗೆ ಒಪ್ಪಿಗೆ ನೀಡಬೇಕು’ ಎಂದು ಕರ್ನಾಟಕದ ಅಧಿಕಾರಿಗಳು ಆಗ್ರಹಿಸಿದರು. 

‘ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥವಾಗುವ ತನಕ ಚರ್ಚೆ ನಡೆಸುವಂತಿಲ್ಲ. ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಸಹ ಸ್ಪಷ್ಟನೆ ನೀಡಿದ್ದಾರೆ’ ಎಂದು ತಮಿಳುನಾಡಿನ ಅಧಿಕಾರಿಗಳು ಗಮನ ಸೆಳೆದರು. 

ಪ್ರಾಧಿಕಾರದ ಅಧ್ಯಕ್ಷರು ಪ್ರತಿಕ್ರಿಯಿಸಿ, ‘ಇದು ವಿಶೇಷ ಸಭೆ. ಇಂದಿನ ಸಭೆಯಲ್ಲಿ ಚರ್ಚೆ ನಡೆಸಲು ಸಾಧ್ಯವಿಲ್ಲ. ಈ ಬಗ್ಗೆ ಚರ್ಚೆ ನಡೆಸಲು ಶೀಘ್ರದಲ್ಲಿ ಸಭೆ ಕರೆಯಲಾಗುವುದು’ ಎಂದು ಭರವಸೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.