ADVERTISEMENT

ಕಾವೇರಿ: ಮಳೆ ಸುರಿದರೆ ಮಾತ್ರ ನೀರು

9.19 ಟಿಎಂಸಿ ಅಡಿ ನೀರು ಹರಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮೇ 2019, 20:00 IST
Last Updated 28 ಮೇ 2019, 20:00 IST
ಕೃಷ್ಣರಾಜಸಾಗರ ಅಣೆಕಟ್ಟೆ
ಕೃಷ್ಣರಾಜಸಾಗರ ಅಣೆಕಟ್ಟೆ   

ನವದೆಹಲಿ: ‘ಮುಂಗಾರು ಆರಂಭವಾಗಿ ಜಲಾಶಯಗಳಲ್ಲಿ ಒಳಹರಿವು ಕಂಡುಬಂದರೆ ಮಾತ್ರ ತಮಿಳುನಾಡಿಗೆ 9.19 ಟಿಎಂಸಿ ಅಡಿ ನೀರು ಹರಿಸಬೇಕು’ ಎಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.

‘ಒಂದೊಮ್ಮೆ ನಿರೀಕ್ಷೆಯಂತೆ ಮಳೆ ಸುರಿಯದಿದ್ದರೆ ನೀರು ಹರಿಸುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿರುವ ಪ್ರಾಧಿಕಾರ, ರಾಜ್ಯದ ಕಾವೇರಿ ಕಣಿವೆ ವ್ಯಾಪ್ತಿಯ ರೈತರ ಆತಂಕವನ್ನು ದೂರ ಮಾಡಿದೆ.

ಮಂಗಳವಾರ ನಡೆದ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ)ದ ಮುಖ್ಯಸ್ಥ ಮಸೂದ್ ಹುಸೇನ್, ಕಾವೇರಿ ನೀರು ನಿರ್ವಹಣೆ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಿದರು.

ADVERTISEMENT

ಸತತ ಮೂರು ಗಂಟೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಪ್ರತಿನಿಧಿಗಳು ಮುಂಗಾರಿನ ನಿರೀಕ್ಷೆ, ನೀರಿನ ಸಂಗ್ರಹ ಪ್ರಮಾಣ, ರೈತರ ಅಗತ್ಯ, ಕುಡಿಯುವ ನೀರಿನ ಬೇಡಿಕೆ ಕುರಿತು ವಿವರಿಸಿದರು.

‘ಸುಪ್ರೀಂ ಕೋರ್ಟ್ ಆದೇಶದಂತೆ ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಜೂನ್ ತಿಂಗಳಿಗೆ ಹಂಚಿಕೆಯಾದ ತಮಿಳುನಾಡಿನ ಪಾಲಿನ ನೀರನ್ನು ಕರ್ನಾಟಕದ ಗಡಿ ಭಾಗದಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದ ಮೂಲಕ ಹರಿಸಬೇಕಿದೆ. ನಿಗದಿಯಂತೆ ಮುಂಗಾರು ಸುರಿದರೆ ಮಾತ್ರ ನೀರು ಹರಿಸುವುದು ಅನಿವಾರ್ಯ’ ಎಂದು ಮಸೂದ್ ಹುಸೇನ್ ಸುದ್ದಿಗಾರರಿಗೆ ತಿಳಿಸಿದರು.

‘ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಈ ಬಾರಿ ಸಾಮಾನ್ಯ ಮುಂಗಾರಿನ ಆಶಾಭಾವ ಇದೆ. ಜಲಾಶಯಗಳಲ್ಲಿ ಒಳಹರಿವು ಕಂಡುಬಂದಲ್ಲಿ ಜೂನ್‌ ಅಂತ್ಯದ ವೇಳೆಗೆ ನೀರು ಹರಿಸುವುದಾಗಿ ಕರ್ನಾಟಕ ಸಮ್ಮತಿ ಸೂಚಿಸಿದೆ’ ಎಂದು ಹೇಳಿದರು.

‘ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯದಿದ್ದರೆ ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯು ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದೆ. ಈ ವರದಿ ಆಧರಿಸಿ ಮುಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಅಗತ್ಯ ಕಂಡುಬಂದರೆ, ತಮಿಳುನಾಡಿಗೆ ನೀರು ಹರಿಸಬೇಕೆಂಬ ನಿರ್ಧಾರವನ್ನು ಪರಿಶೀಲಿಸಲಾಗುವುದು’ ಎಂದು ವಿವರಿಸಿದರು.

‘ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುತ್ತಿರುವ ಕರ್ನಾಟಕದ ನಿರ್ಧಾರದ ಬಗ್ಗೆ ಸಭೆಯಲ್ಲಿ ಯಾವುದೇ ರೀತಿಯ ಚರ್ಚೆ ನಡೆಯಲಿಲ್ಲ’ ಎಂದರು.

‘ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಒಟ್ಟು ಮೂರು ಸಭೆ ಆಯೋಜಿಸಲಾಗಿದೆ. ಕಾವೇರಿ ಜಲಾನಯನ ಮತ್ತು ಅಚ್ಚುಕಟ್ಟು ಪ್ರದೇಶಗಳ ಸ್ಥಿತಿಗತಿಯ ಕುರಿತು ಸಮಗ್ರವಾಗಿ ಚರ್ಚೆ ನಡೆದಿದೆ. ಕಣಿವೆ ವ್ಯಾಪ್ತಿಯ ರಾಜ್ಯಗಳ ಪ್ರತಿನಿಧಿಗಳು ಸೌಹಾರ್ದದಿಂದಲೇ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ನೀರಿನ ನಿರ್ವಹಣೆ, ಜಲಾಶಯಗಳ ಮೇಲ್ವಿಚಾರಣೆ, ಪ್ರಾಧಿಕಾರಕ್ಕೆ ಅನುದಾನ ಮತ್ತಿತರ ವಿಷಯಗಳು ಚರ್ಚೆಗೆ ಬಂದವು’ ಎಂದು ಹೇಳಿದರು.

ಕುಡಿಯುವ ನೀರಿಗೂ ತೀವ್ರ ಸಮಸ್ಯೆ
ಜೂನ್‌ ಅಂತ್ಯಕ್ಕೆ ರಾಜ್ಯದ ಜಲಾಶಯಗಳು ಭರ್ತಿಯಾಗದಿದ್ದರೆ ತಮಿಳುನಾಡಿನ ಪಾಲಿನ ನೀರನ್ನು ಹರಿಸುವುದು ಅಸಾಧ್ಯ ಎಂದು ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳು ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ.

ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಬೇಸಿಗೆ ವೇಳೆ ನೀರಿನ ಸಂಗ್ರಹ ಕಡಿಮೆ ಇದೆ. ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗಿದೆ. ಉತ್ತಮ ಮಳೆ ಸುರಿಯದಿದ್ದರೆ ನೀರು ಹರಿಸುವ ಪ್ರಶ್ನೆಯೇ ಇಲ್ಲ ಎಂಬುದನ್ನು ಪ್ರಾಧಿಕಾರದ ಗಮನಕ್ಕೆ ತರಲಾಗಿದೆ’ ಎಂದು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.