ADVERTISEMENT

ಲಾಕ್‌ಡೌನ್‌ | ಕಾವೇರಿ ದಂಡೆಯಲ್ಲಿ ತಮಿಳಿಗರ ಠಿಕಾಣಿ

ಊರಿಗೆ ಸೇರಿಸದ ಗ್ರಾಮಸ್ಥರು–ಅರಣ್ಯ ಇಲಾಖೆಗೆ ತಲೆನೋವು

ಬಿ.ಬಸವರಾಜು
Published 26 ಏಪ್ರಿಲ್ 2020, 19:59 IST
Last Updated 26 ಏಪ್ರಿಲ್ 2020, 19:59 IST
ಕಾವೇರಿ ನದಿ ದಂಡೆಯಲ್ಲಿ ಬೀಡು ಬಿಟ್ಟಿರುವ ಕುಟುಂಬ
ಕಾವೇರಿ ನದಿ ದಂಡೆಯಲ್ಲಿ ಬೀಡು ಬಿಟ್ಟಿರುವ ಕುಟುಂಬ   

ಹನೂರು: ಲಾಕ್‌ಡೌನ್‌ ಜಾರಿಯಾದ ನಂತರ ತಮಿಳುನಾಡಿನ ವಿವಿಧ ಗ್ರಾಮಗಳ ಜನರು ಕಾವೇರಿ ವನ್ಯಧಾಮ ವ್ಯಾಪ್ತಿಯ ಕಾವೇರಿ ನದಿ ದಂಡೆಯಲ್ಲಿ ಬೀಡು ಬಿಟ್ಟಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿದೆ.

ನದಿಯಲ್ಲಿ ಅಕ್ರಮ ಮೀನುಗಾರಿಕೆ, ವನ್ಯಧಾಮದಲ್ಲಿ ಬೇಟೆ ಪ್ರಕರಣಗಳು ವರದಿಯಾಗುತ್ತಿವೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ತಮಿಳುನಾಡಿನ ಮೆಟ್ಟೂರು, ಈರೋಡ್, ಧರ್ಮಪುರಿ, ಸತ್ತಿ, ಭವಾನಿ ಸೇರಿದಂತೆ ವಿವಿಧೆಡೆ ಕೆಲಸ ಮಾಡಿಕೊಂಡಿದ್ದ ಜನರು ತಮ್ಮ ಊರಿಗೆ ಮರಳಿದ್ದರು. ಕೊರೊನಾ ಭೀತಿಯಿಂದಾಗಿ ಗ್ರಾಮ ಪ್ರವೇಶಿಸಲು ಬಿಡದೆ ಗ್ರಾಮಸ್ಥರು, 15 ದಿನ ಹೊರಗಿರುವಂತೆ ತಾಕೀತು ಮಾಡಿದ್ದಾರೆ. ಹೀಗಾಗಿ, 50ರಿಂದ 60 ಕುಟುಂಬಗಳು ತಮಿಳುನಾಡಿನ ಭಾಗದ ನದಿಯಂಚಿನಲ್ಲಿ ಬೀಡು ಬಿಟ್ಟಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಕೌದಳ್ಳಿ ವನ್ಯಜೀವಿ ವಲಯದ ಸಾವಿರಮತ್ತಿ ಕ್ಯಾಂಪಿನ ಆಲಟ್ಟಿನತ್ತ, ಎಳ್ಳುಹೊಲನತ್ತ, ಜಗಲಿಯಾಣೆ ಕ್ಯಾಂಪಿನ ಮಾವಿನ ಮರದ ಜಾಲು, ಕೆಸರುಗೊಂದಿಜಾಲು, ಡೊಲ್ಲುಮತ್ತಿ, ತಿರುಣೆಮಡು, ಉಗನಿಯಕ್ಯಾಂಪಿನ ಅನುಗೊಳಿಜಾಲು, ನೀರುನಾಯಿಗೊಂದಿ, ಉಡುಪಟ್ಟಿ ಜೌಲು, ಗೂಳೆತ್ತಿನ ಕಲ್ಲು, ಮೆಟ್ಟುಬಂಡೆ ಕ್ಯಾಂಪಿನ ಕೊಂಗಮಡು, ಮಾವಿನ ಮರದ ಗೋಡು, ಸಿಡಿಲುಬಿದ್ದ ಕಲ್ಲು ಮತ್ತು ಮೆಟ್ಟೇರಿ ಕ್ಯಾಂಪಿನ
ಕೋಸುಕೈತೋಟ, ಕಾಬಳ್ಳಿಹಳ್ಳ, ಕನಕರಾಯನ ಬೀಟ್, ರಾಶಿ ಮರಳು ಕಡೆ ನದಿ ತೀರದ ಬಯಲಿನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಪತ್ತೆ ಸವಾಲು:ವನ್ಯಧಾಮವನ್ನು ಹಾದು ಹೋಗಿರುವ ಕಾವೇರಿ ನದಿ ಎರಡೂ ರಾಜ್ಯಗಳನ್ನು ಭೌಗೋಳಿಕವಾಗಿ ಬೇರ್ಪಡಿಸಿದೆ. ಈವರೆಗೆ ದಾಖಲಾದ ಬಹಳಷ್ಟುಬೇಟೆ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದವರು ಬಹುತೇಕರು ತಮಿಳುನಾಡಿನವರು.

*
ತಮಿಳುನಾಡಿನ ಭಾಗದ ನದಿ ತೀರದಲ್ಲಿ ಜನ ತಂಗಿರುವುದರಿಂದ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಅವರು ನಮ್ಮ ಕಡೆಗೆ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ.
-ಡಾ.ಎಸ್‌.ರಮೇಶ್, ‌ಡಿಸಿಎಫ್, ಕಾವೇರಿ ವನ್ಯಧಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.