ADVERTISEMENT

ಕುಡಿಯುವ ನೀರಿಗೆ ಅಡ್ಡಿಯಾಗದಂತೆ ತಮಿಳುನಾಡಿಗೆ ನೀರು ಹರಿಸಿ: ಕಾವೇರಿ ಪ್ರಾಧಿಕಾರ

ಜೂನ್ ಪಾಲಿನ ಕಾವೇರಿ ನೀರು ಹರಿಸಲು ಪ್ರಾಧಿಕಾರದ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮೇ 2019, 10:35 IST
Last Updated 28 ಮೇ 2019, 10:35 IST
   

ನವದೆಹಲಿ: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ‌ ಸುರಿದು ರಾಜ್ಯದ ಜಲಾಶಯಗಳಿಗೆ ಒಳಹರಿವು ಬಂದರೆ ತಮಿಳುನಾಡಿಗೆ 9.19 ಟಿಎಂಸಿ ಅಡಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.

ಮಂಗಳವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಪ್ರಾಧಿಕಾರದ ಅಧ್ಯಕ್ಷ, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಈ ಸೂಚನೆ ನೀಡಿದರು.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ‌ ಜೂನ್ ತಿಂಗಳಲ್ಲಿನ ತಮಿಳುನಾಡಿನ ಪಾಲನ್ನು ಕರ್ನಾಟಕ ಬಿಳಿಗುಂಡ್ಲು ಮಾಪನ ಕೇಂದ್ರದ ಮೂಲಕ ಹರಿಸಬೇಕಿದೆ. ಆದರೆ, ನಿಗದಿಗೆ ಸರಿಯಾಗಿ ಮುಂಗಾರು ಸುರಿದು ಒಳ ಹರಿವು ಆರಂಭವಾದರೆ ಮಾತ್ರ ಕರ್ನಾಟಕವು ನೀರು ಹರಿಸುವುದು ಅನಿವಾರ್ಯ ಎಂದು ಮಸೂದ್ ಹುಸೇನ್ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಕೇಂದ್ರ ಜಲ‌ ಆಯೋಗದ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಸತತ ಮೂರು ಗಂಟೆ ನಡೆದ ಸಭೆಯಲ್ಲಿ ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಪ್ರತಿನಿಧಿಗಳು ಭಾಗವಹಿಸಿ ನೀರಿನ ಲಭ್ಯತೆ ಮತ್ತು ನಿರ್ವಹಣೆ ಕುರಿತು ಚರ್ಚಿಸಿದರು.

ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಮಳೆ ಸುರಿಯುವ ಸಾಧ್ಯತೆ, ಜಲಾಶಯಗಳ ಒಳಹರಿವು ಮತ್ತು ಹೊರಹರಿವು, ಜಲಾನಯನ ಪ್ರದೇಶದಲ್ಲಿ ಲಭ್ಯವಾಗಲಿರುವ ನೀರಿನ ಸಮಗ್ರ ನಿರ್ವಹಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪೂರ್ವಭಾವಿಯಾಗಿ ಚರ್ಚೆ ನಡೆಸಲಾಯಿತು.

ಕೃಷ್ಣರಾಜ ಸಾಗರ ಜಲಾಶಯ ವ್ಯಾಪ್ತಿಯ ರೈತರು ಬೇಸಿಗೆ ಬೆಳೆಗೆ ನೀರಿನ ಬೇಡಿಕೆ ಇರಿಸಿರುವುದರ ಕುರಿತೂ ಕರ್ನಾಟಕದ ಪ್ರತಿನಿಧಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು.

ಜೂನ್ ತಿಂಗಳ ತನ್ನ ಪಾಲಿನ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡಿಸುವಂತೆ ತಮಿಳುನಾಡಿನ ಪ್ರತಿನಿಧಿಗಳು ಸಭೆಯಲ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.