ADVERTISEMENT

ಲಂಚ ಪಡೆಯುತ್ತಿದ್ದ ಕಸ್ಟಮ್ಸ್‌ ಸೂಪರಿಂಟೆಂಡೆಂಟ್‌ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 16:14 IST
Last Updated 4 ಜೂನ್ 2022, 16:14 IST
   

ಬೆಂಗಳೂರು: ವಿದೇಶದಿಂದ ಆಮದು ಮಾಡಿಕೊಂಡಿದ್ದ ಸರಕನ್ನು ಸಾಗಿಸಲು ಅನುಮತಿ ನೀಡಲು ₹ 8,500 ಲಂಚ ಪಡೆಯುತ್ತಿದ್ದ ಸೀಮಾ ಸುಂಕ (ಕಸ್ಟಮ್ಸ್‌) ಇಲಾಖೆಯ ಸೂಪರಿಂಟೆಂಡೆಂಟ್‌ ಶಶಿಕಾಂತ್‌ ಮಚ್ಚೀಂದ್ರ ದೇಶಮುಖ್‌ ಎಂಬುವವರನ್ನು ಸಿಬಿಐ ಶುಕ್ರವಾರ ಬಂಧಿಸಿದೆ.

‘ಉದ್ಯಮಿಯೊಬ್ಬರು ವಿದೇಶದಿಂದ ಕೆಲವು ಸರಕುಗಳನ್ನು ಆಮದು ಮಾಡಿಕೊಂಡಿದ್ದರು. ಅವುಗಳ ಪರಿಶೀಲನೆ ಪೂರ್ಣಗೊಳಿಸಿ, ಸಾಗಣೆಗೆ ಅನುಮತಿ ನೀಡುವಂತೆ ಚಾಮರಾಜಪೇಟೆಯಲ್ಲಿರುವ ಕಸ್ಟಮ್ಸ್‌ ಇಲಾಖೆಯ ಕಚೇರಿಗೆ ಮನವಿ ಸಲ್ಲಿಸಿದ್ದರು. ಸರಕುಗಳ ಸಾಗಣೆಗೆ ಅನುಮತಿ ನೀಡಲು ಲಂಚ ಕೊಡುವಂತೆ ಅಲ್ಲಿನ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಈ ಕುರಿತು ಉದ್ಯಮಿ ಸಿಬಿಐ ಬೆಂಗಳೂರು ಕಚೇರಿಗೆ ದೂರು ನೀಡಿದ್ದರು’ ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ದೂರುದಾರರ ಜತೆ ಮಾತುಕತೆ ನಡೆಸಿದ ಆರೋಪಿ ಪುನಃ ಲಂಚಕ್ಕೆ ಒತ್ತಾಯಿಸಿದರು. ₹ 8,500 ಪಡೆಯುತ್ತಿದ್ದಾಗ ದಾಳಿಮಾಡಿದ ಸಿಬಿಐ ಅಧಿಕಾರಿಗಳ ತಂಡ ಶಶಿಕಾಂತ್‌ ಅವರನ್ನು ಬಂಧಿಸಿದೆ. ಪ್ರಕರಣದಲ್ಲಿ ಇತರ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಧಿಕಾರಿಯ ಮನೆ ಸೇರಿದಂತೆ ಬೆಂಗಳೂರಿನ ಎರಡು ಹಾಗೂ ಮಹಾರಾಷ್ಟ್ರದ ಒಂದು ಸ್ಥಳದಲ್ಲಿ ಶೋಧ ನಡೆಸಲಾಗಿದೆ. ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.