ADVERTISEMENT

ಐಎಂಎ ಪ್ರಕರಣ | ಮನ್ಸೂರ್ ಖಾನ್‌ ವಿರುದ್ಧ ದೋಷಾರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 19:42 IST
Last Updated 9 ಸೆಪ್ಟೆಂಬರ್ 2019, 19:42 IST
   

ಬೆಂಗಳೂರು: ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ಮನ್ಸೂರ್‌ ಖಾನ್‌ ಸೇರಿದಂತೆ ಹದಿನೈದು ಆರೋಪಿಗಳು ಮತ್ತು ಐದು ಕಂಪನಿಗಳ ವಿರುದ್ಧ ಸಿಬಿಐ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿದೋಷಾರೋಪ ಪಟ್ಟಿ ಸಲ್ಲಿಸಿದೆ.

ಕಂಪನಿ ನಿರ್ದೇಶಕರಾದ ನಿಜಾಮುದ್ದೀನ್‌ ಅಜೀಮುದ್ದೀನ್‌, ನಾಸಿರ್‌ ಹುಸೇನ್‌, ನಾವಿದ್‌ ಅಹಮದ್‌ ನಟಮಕರ್‌, ವಾಸಿಂ, ಅರ್ಷದ್‌ ಖಾನ್‌, ಅಹಮದ್‌ ಅಪ್ಸರ್‌ ಪಾಷಾ, ದಾದಾಪೀರ್‌ ಇಮಾಮ್‌ಸಾಬ್‌, ಸದಸ್ಯರಾದ ಶಾದಬ್‌ ಅಕ್ಬರ್‌ಖಾನ್‌, ಇಸ್ರಾರ್‌ ಅಹಮದ್‌ ಖಾನ್‌, ಫುಜೈಲ್‌ ಅಹಮದ್‌, ಮೊಹಮ್ಮದ್‌ ಇದ್ರಿಸ್‌, ಉಸ್ಮಾನ್‌ ಅಬ್ರೈಸ್‌, ಆಡಿಟರ್‌ ಇಕ್ಬಾಲ್‌ ಖಾನ್‌ ಹಾಗೂ ಖಾಸಗಿ ವ್ಯಕ್ತಿ ಸಯ್ಯದ್‌ ಮುಜಾಹಿದ್‌ ಅವರನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಐಎಂಎ ಅಡ್ವೈಸರಿ ಪ್ರೈವೇಟ್‌ ಲಿಮಿಟೆಡ್‌, ಐಎಂಎ ಹೆಲ್ತ್‌ಕೇರ್‌, ಐಎಂಎ ಜ್ಯುವೆಲರಿ, ಐಎಂಎ ಬುಲಿಯನ್‌ಅಂಡ್‌ ಟ್ರೇಡಿಂಗ್‌ ಹಾಗೂ ಐಎಂಎ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಹೆಸರನ್ನು ಪ್ರಸ್ತಾಪಿಸಲಾಗಿದೆ.

ADVERTISEMENT

ಆರೋಪಿಗಳು ಹಾಗೂ ಆರೋಪಿತ ಸಂಸ್ಥೆಗಳ ವಿರುದ್ಧ ನಂಬಿಕೆ ದ್ರೋಹ, ನಕಲಿ ದಾಖಲೆಗಳ ಸೃಷ್ಟಿ, ವಂಚನೆ ಹಾಗೂ ಕ್ರಿಮಿನಲ್‌ ಪಿತೂರಿ ಸೇರಿದಂತೆ ಐಪಿಸಿ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸಿಬಿಐಗೆ ವರ್ಗಾಯಿಸಲಾಗಿದೆ. ಆಗಸ್ಟ್‌ 30ರಂದು ಸಿಬಿಐ ದೂರು ದಾಖಲಿಸಿದೆ. ಮನ್ಸೂರ್‌ ಖಾನ್‌ ಒಡೆತನದ ಕಂಪನಿಗಳು ಸಾವಿರಾರು ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪಕ್ಕೆ ಒಳಗಾಗಿವೆ. ಠೇವಣಿದಾರರಿಂದ ಸಂಗ್ರಹಿಸಿದ ಹಣವನ್ನು ಯಾವುದೇ ವ್ಯಾಪಾರಕ್ಕೆ ಬಳಸಿಲ್ಲ. ಬದಲಾಗಿ, ಠೇವಣಿಯ ಕೊಂಚ ಭಾಗವನ್ನು ಹೂಡಿಕೆದಾರರಿಗೆ ಲಾಭದ ನೆಪದಲ್ಲಿ ಹಿಂತಿರುಗಿಸಲಾಗಿದೆ.

ಠೇವಣಿದಾರರ ಹಣವನ್ನು ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರಲ್ಲಿ ಆಸ್ತಿ ಖರೀದಿಸಲು ಆರೋಪಿ ಬಳಸಿಕೊಂಡಿದ್ದಾರೆ. ಅಲ್ಲದೆ, ತನ್ನ ಅಕ್ರಮ ಚಟುವಟಿಕೆ ಅಡ್ಡಿಯಾಗದಂತೆ ಭಾರಿ ಹಣವನ್ನು ಸರ್ಕಾರಿ ಅಧಿಕಾರಿಗಳಿಗೆ ಲಂಚವಾಗಿ ನೀಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಈ ಪ್ರಕರಣದ ತನಿಖೆಗೆ ಸಿಬಿಐ ಅಧಿಕಾರಿಗಳು, ಚಾರ್ಟೆಡ್‌ ಅಕೌಂಟೆಂಟ್‌ಗಳು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಕಂ‍‍ಪ್ಯೂಟರ್‌ ತಜ್ಞರ 12 ಪರಿಣಿತರ ತಂಡ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.