ADVERTISEMENT

ಸಿ.ಡಿ. ಪ್ರಕರಣ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಯುವತಿ ಪತ್ರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 19:28 IST
Last Updated 29 ಮಾರ್ಚ್ 2021, 19:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಿ.ಡಿ. ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಕೋರಿ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ.

ಇ-ಮೇಲ್ ಮೂಲಕವೇ ಮುಖ್ಯ ನ್ಯಾಯಮೂರ್ತಿ ಅವರಿಗೆ ಭಾನುವಾರ ಪತ್ರ ಕಳುಹಿಸಲಾಗಿದೆ ಎಂಬುದು ತಿಳಿದು ಬಂದಿದೆ.

'ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿ. ಸಾರ್ವಜನಿಕವಾಗಿಯೇ ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್‍ಐಟಿ ತನಿಖೆ ನಡೆಯಬೇಕು' ಎಂದು ಪತ್ರದಲ್ಲಿ‌ ಯುವತಿ ಕೋರಿದ್ದಾರೆ.

ADVERTISEMENT

'ಎಫ್ಐಆರ್ ದಾಖಲಾದರೂ ಆರೋಪಿ‌ ವಿರುದ್ಧ ಯಾವುದೇ ಕ್ರಮ‌ಕೈಗೊಂಡಿಲ್ಲ. ನನಗೆ ಅನ್ಯಾಯವಾಗುತ್ತಿದೆ.‌ ನೀವೆ ನ್ಯಾಯ ಒದಗಿಸಬೇಕು' ಎಂದೂ ಅವರು ತಿಳಿಸಿದ್ದಾರೆ.

ಪತ್ರದ ಪ್ರಮುಖ ಅಂಶಗಳು:

lನಾನು ಅತ್ಯಾಚಾರ ಪ್ರಕರಣದ ಸಂತ್ರಸ್ತೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಿಸಿರುತ್ತೇನೆ.

lರಮೇಶ ಜಾರಕಿಹೊಳಿ ಪ್ರಭಾವಿ ವ್ಯಕ್ತಿ. ಅವರ ವಿರುದ್ಧ ಮಾಡಿರುವ ಆರೋಪಗಳನ್ನು ಹಿಂಪಡೆಯುವಂತೆ ಸಾರ್ವಜನಿಕವಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ರಮೇಶ ಮತ್ತು ಅವರ ಬೆಂಬಲಿಗರಿಂದ ಬೆದರಿಕೆ ಬರುತ್ತಿರುವುದರಿಂದ ಆತಂಕ ತೋಡಿಕೊಂಡಿದ್ದೇನೆ.

lನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಎಸ್‌ಐಟಿ ಅಧಿಕಾರಿಗಳಿಗೆ ವಿನಂತಿಸಿದರೂ ಪ್ರಯೋಜನವಾಗಿಲ್ಲ. ರಮೇಶ ಅವರೊಂದಿಗೆ ಎಸ್‌ಐಟಿ ಶಾಮೀಲಾಗಿದೆ. ಪ್ರಕರಣ ಸಂಬಂಧ ನ್ಯಾಯಾಧೀಶರ ಮುಂದೆ ಹಾಜರಾಗಿ ಆರೋಪಿ ವಿರುದ್ಧ ಹೇಳಿಕೆ ನೀಡದಂತೆ ನನ್ನನ್ನು ತಡೆಯಲು ಎಸ್‌ಐಟಿ ಮೂಲಕ ಪ್ರಯತ್ನಿಸುತ್ತಿದ್ದಾರೆ.

lಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ನಾಶಗೊಳಿಸಲು ರಮೇಶ ಜಾರಕಿಹೊಳಿ ಯತ್ನಿಸಿದ್ದಾರೆ. ನಾನು ತನಿಖಾ ಸಂಸ್ಥೆಯನ್ನು ಸಂಪರ್ಕಿಸದಂತೆ ಹಾಗೂ ತಮ್ಮ ವಿರುದ್ಧ ಹೇಳಿಕೆ ದಾಖಲಿಸದಂತೆ ನಿರ್ಬಂಧಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ದವಿರುವುದಾಗಿ ರಮೇಶ ಧಮ್ಕಿ ಹಾಕಿದ್ದಾರೆ.

lನನ್ನನ್ನು ಯಾವ ಕ್ಷಣದಲ್ಲಾದರೂ, ಎಲ್ಲಿಯಾದರೂ ರಮೇಶ್ ಜಾರಕಿಹೊಳಿ ಹತ್ಯೆ ಮಾಡಬಹುದು. ಆರೋಪಿ ತಾಳಕ್ಕೆ ತಕ್ಕಂತೆ ಎಸ್‌ಐಟಿ ಕುಣಿಯುತ್ತಿದೆ. ರಾಜ್ಯ ಸರ್ಕಾರವೂ ಅವರ ರಕ್ಷಣೆಗೆ ನಿಂತಿದೆ. ಹೀಗಾಗಿ, ನನಗೆ ರಾಜ್ಯ ಸರ್ಕಾರ ಹಾಗೂ ತನಿಖಾ ಸಂಸ್ಥೆ ಮೇಲೆ ವಿಶ್ವಾಸವಿಲ್ಲ.

lನ್ಯಾಯಕ್ಕಾಗಿ ನಾನು ಸ್ವ–ಇಚ್ಛೆಯಿಂದ ಹೋರಾಡುತ್ತಿದ್ದೇನೆ. ನಾನೊಬ್ಬ ಶೋಷಿತೆಯಾಗಿದ್ದು, ನನ್ನ ಮಾನ ಮತ್ತು ಗೌರವ ಕಾಪಾಡಿಕೊಳ್ಳಲು, ಸ್ತ್ರೀ ಸ್ವಾತಂತ್ರ್ಯವನ್ನು ರಕ್ಷಸಿಕೊಳ್ಳಲು ಹೋರಾಡುತ್ತಿದ್ದೇನೆ. ನನ್ನ ಪೋಷಕರು ನೀಡಿರುವ ಹೇಳಿಕೆ
ಯಂತೆ ನನ್ನನ್ನು ಯಾರೂ ಅಪಹರಿಸಿಲ್ಲ. ಆಧಾರ ರಹಿತ ಹೇಳಿಕೆ ನೀಡುವಂತೆ ಪೋಷಕರ ಮೇಲೆ ರಮೇಶ ಜಾರಕಿಹೊಳಿ ಒತ್ತಡ ಹಾಕುತ್ತಿದ್ದಾರೆ.

lನನ್ನ ಕುಟುಂಬವನ್ನೇ ರಮೇಶ ಜಾರಕಿಹೊಳಿ ಒತ್ತೆಯಾಗಿರಿಸಿಕೊಂಡಿದ್ದಾರೆ. ಡಿವೈಎಸ್ಪಿ ಕಟ್ಟಿಮನಿ, ರಮೇಶ ಪರ ಕೆಲಸ ಮಾಡುತ್ತಿದ್ದಾರೆ. ನಮ್ಮ ಕುಟುಂಬದ ಮೇಲೂ ಅವರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ, ಗೌರವಾನ್ವಿತ ನ್ಯಾಯಾಲಯವು ನಾನು ಎದುರಿಸುತ್ತಿರುವ ಜೀವಭಯವನ್ನು ಗಂಭೀರವಾಗಿ ಪರಿಗಣಿಸುವಂತೆ ವಿನಂತಿಸುತ್ತೇನೆ. ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಮಾಡಿ ನನಗೆ ನ್ಯಾಯ ಕೊಡಿಸಬೇಕು ಎಂದು ಬೇಡಿಕೊಳ್ಳುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.