ADVERTISEMENT

ಸಿಡಿ ಪ್ರಕರಣ: ಕೋರ್ಟ್‌ ಮಧ್ಯಪ್ರವೇಶಿಸಲಿ: ಕಾಂಗ್ರೆಸ್‌ ನಾಯಕಿ ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 19:04 IST
Last Updated 29 ಮಾರ್ಚ್ 2021, 19:04 IST

ಬೆಂಗಳೂರು: ‘ಸಿ.ಡಿ ಪ್ರಕರಣದಿಂದ ಮಹಿಳಾ ಸಂಕುಲಕ್ಕೆ ಅವಮಾನ ಆಗಿದೆ. ಬಿಜೆಪಿ ಶಾಸಕರು ನೀಚತನ ತೋರಿಸಿದ್ದಾರೆ. ಈ ಪ್ರಕರಣದಲ್ಲಿ ಕೋರ್ಟ್‌ ಮಧ್ಯಪ್ರವೇಶಿಸಬೇಕು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು’ ಎಂದು ಕಾಂಗ್ರೆಸ್‌ ನಾಯಕಿ ಮೋಟಮ್ಮ ಆಗ್ರಹಿಸಿದರು.

ಪಕ್ಷದ ನಾಯಕಿಯರಾದ ಉಮಾಶ್ರೀ, ಜಯಮಾಲಾ ಮತ್ತು ಮಂಜುಳಾ ನಾಯ್ದು ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದು ರಮೇಶ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್‌ನಿಂದ ಬಿಜೆಪಿಗೆ ಬಂದ ಶಾಸಕರಿಂದ. ತಮಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲವೆಂದು ಅವರೆಲ್ಲ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ದೂರು ಕೊಡುತ್ತಿದ್ದರು. ಅದಕ್ಕೆ ಬಿಜೆಪಿಯವರೇ ಈ ಸಿ.ಡಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ಜಯಮಾಲಾ ಮಾತನಾಡಿ, ‘ಈ ಪ್ರಕರಣದಲ್ಲಿ ಪ್ರತಿನಿತ್ಯ ದ್ವಂದ್ವ ಹೇಳಿಕೆಗಳು ಬರುತ್ತಿವೆ. ಸಂತ್ರಸ್ತೆ ಮಾತ್ರ ಸತ್ಯ ಹೇಳಲು ಸಾಧ್ಯ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಬೇಕು. ಒಬ್ಬರ ಮೇಲೆ ಆರೋಪ ಹೊರಿಸುವಾಗ ಯೋಚಿಸಬೇಕು. ಕೆಪಿಸಿಸಿ ಅಧ್ಯಕ್ಷರಿಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಂಥವರು ಇಂಥ ಹೊಲಸು ಕೆಲಸ ಮಾಡುತ್ತಾರಾ’ ಎಂದು ಪ್ರಶ್ನಿಸಿದರು.

ADVERTISEMENT

‘ನನ್ನ ಅನುಭವದಲ್ಲಿ ಇಷ್ಟೊಂದು ಗೊಂದಲದಿಂದ ಕೂಡಿದ ಮೊದಲ ಪ್ರಕರಣವಿದು. ಒಬ್ಬ ಪ್ರಭಾವಿ ವ್ಯಕ್ತಿಯ ಮೇಲೆ ಯುವತಿ ಆರೋಪ‌ ಮಾಡುತ್ತಿರುವುದರಿಂದ ಗಂಭೀರ ವಿಚಾರ. ಆಕೆಯನ್ನು ಪತ್ತೆ ಮಾಡಲು ಆಗಿಲ್ಲ ಎಂದ ಮೇಲೆ ಅಸಹಾಯಕರೆಂದು ಸರ್ಕಾರ ಒಪ್ಪಿಕೊಳ್ಳಬೇಕು’ ಎಂದು ಉಮಾಶ್ರೀ ಹೇಳಿದರು.

‘ಈ ಪ್ರಕರಣದಲ್ಲಿ ಎಸ್‌ಐಟಿ ಪ್ರಾಥಮಿಕ ತನಿಖಾ ವರದಿ ನೀಡಬೇಕಿತ್ತು. ವಿಳಂಬ ಮಾಡುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ’ ಎಂದು ಮಂಜುಳಾ ನಾಯ್ಡು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.