ADVERTISEMENT

ನಿರಾಣಿ- ಯತ್ನಾಳ ಮಧ್ಯೆ ‘ಸಿ.ಡಿ’ ಕಿತ್ತಾಟ

ಸಿ.ಡಿ ಇಟ್ಟುಕೊಂಡು ಮಂತ್ರಿ ಆಗ್ತಾರೆ–ಯತ್ನಾಳ l ತಾಕತ್ತಿದ್ದರೆ ಎಲೆಕ್ಷನ್‌ ಗೆದ್ದು ಬರಲಿ– ನಿರಾಣಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 19:36 IST
Last Updated 7 ಜನವರಿ 2023, 19:36 IST
ನಿರಾಣಿ-,ಯತ್ನಾಳ ಮಧ್ಯೆ ‘ಸಿ.ಡಿ’ ಕಿತ್ತಾಟ
ನಿರಾಣಿ-,ಯತ್ನಾಳ ಮಧ್ಯೆ ‘ಸಿ.ಡಿ’ ಕಿತ್ತಾಟ   

ವಿಜಯಪುರ: ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶನಿವಾರ ಮಾಧ್ಯಮಗಳ ಎದುರು ಪರಸ್ಪರ ಆರೋಪ, ಪ್ರತ್ಯಾರೋಪ, ಸವಾಲು– ಪ್ರತಿ ಸವಾಲು ಹಾಕುವ ಜೊತೆಗೆ ಕೆಸರೆರಚಾಟ ಮಾಡಿಕೊಂಡಿದ್ದಾರೆ.

‘ಯಾರ ಯಾರದ್ದೋ ಸಿ.ಡಿ ಇಟ್ಟುಕೊಂಡು ನಿರಾಣಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸಿ.ಡಿ ಇಟ್ಟುಕೊಂಡೇ ಅವರು ಮಂತ್ರಿಯಾಗುತ್ತಾರೆ. ನಾ ಅಂಥ ಹಲ್ಕಾ ಕೆಲಸ ಮಾಡಲ್ಲ’ ಎಂದು ಯತ್ನಾಳ ಅವರು ಸಚಿವ ಮುರುಗೇಶ ನಿರಾಣಿ ವಿರುದ್ಧ ಹರಿಹಾಯ್ದರು.

‘ತಾಕತ್ತಿದ್ದರೆ, ಅಪ್ಪಗೆ ಹುಟ್ಟಿದ್ದರೆ ಸಿ.ಡಿ ಬಿಡುಗಡೆ ಮಾಡಲಿ. ನನಗೆ ಟಿಕೆಟ್ ಕೊಡುವವಾ ಇವಾ ಯಾರು?’ ಎಂದು ಯತ್ನಾಳ ಹೇಳಿದರು. ‘ವಿಜಯಪುರ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆ ಯಲ್ಲಿ ನಿರಾಣಿ, ವಿಜಯೇಂದ್ರ ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಹಣ ನೀಡಿ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಯತ್ನಿಸಿದ್ದರು’ ಎಂದು ಆರೋಪಿಸಿದರು. ‘ಬಿಜೆಪಿ ಬಂಡಾಯ, ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿಲ್ಲ ಎಂದಾದರೆ ವಿಜಯೇಂದ್ರ, ನಿರಾಣಿ ಧರ್ಮಸ್ಥಳದಲ್ಲಿ ಆಣೆ ಮಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

ಮತದಾರರು ಪಾಠ ಕಲಿಸ್ತಾರೆ: ನಿರಾಣಿ

ಯತ್ನಾಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಮುರುಗೇಶ ನಿರಾಣಿ, ‘ಸಿ.ಡಿ ಮಾಡಿದವರಿಗೆ, ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದವರಿಗೆ ಮಾತ್ರ ಇದೆಲ್ಲ ಗೊತ್ತಿರುತ್ತದೆ. ನನಗೆ ಗೊತ್ತಿಲ್ಲ’ ಎಂದು ಮಾತಿನ ಮೂಲಕವೇ ಯತ್ನಾಳಗೆ ತಿವಿದರು.

‘ಬಿಜೆಪಿ ಅಭ್ಯರ್ಥಿಗಳಿಗೆ ಚುನಾವಣೆಗೆ ಹಣ ನೀಡಿದ್ದೇನೆಯೇ ಹೊರತು, ಬೇರೆ ಪಕ್ಷದವರಿಗೆ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಿನಗೆ ತಾಕತ್ತಿದ್ದರೇ ಈ ಬಾರಿ ಎಲೆಕ್ಷನ್‌ ಗೆದ್ದು ಬಾ. ವಿಜಯಪುರ ಮತದಾರರು ನಿನಗೆ ಪಾಠ ಕಲಿಸಲು ಸಜ್ಜಾಗಿದ್ದಾರೆ, ಕಾದು ನೋಡು’ ಎಂದು ಯತ್ನಾಳಗೆ ಸವಾಲು ಹಾಕಿದರು.

‘ಮುಂದಿನ ಚುನಾವಣೆಯಲ್ಲಿ ವಿಜಯಪುರ ನಗರ ಬಿಜೆಪಿ ಟಿಕೆಟ್‌ ಯಾರಿಗೆ ಸಿಗುತ್ತದೆ ಎಂದು ನೋಡೋಣ? ನನ್ನ ಬಳಿ ಅಧಿಕಾರ ಇದ್ದರೆ ಈಗಲೇ ಹೇಳುತ್ತಿದ್ದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಬೊಮ್ಮಾಯಿ, ಮುಖಂಡರಾದ ಬಿ.ಎಸ್‌. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಹರಿಹರ ಪೀಠ ಮತ್ತು ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೇ ಇನ್ನು ಮುಂದೆ ಸರಿ ಇರುವುದಿಲ್ಲ, ಏನ್‌ ಹುಡುಗಾಟ ಹಚ್ಚಿದ್ದೀಯಾ?‘ ಎಂದು ಏಕ ವಚನದಲ್ಲೇ ಯತ್ನಾಳ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಯಾರ ಯಾರದ್ದೋ ಸಿ.ಡಿ ಇಟ್ಟುಕೊಂಡು ನಿರಾಣಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸಿ.ಡಿ ಇಟ್ಟುಕೊಂಡೇ ಅವರು ಮಂತ್ರಿಯಾಗುತ್ತಾರೆ. ನಾ ಅಂಥ ಹಲ್ಕಾ ಕೆಲಸ ಮಾಡಲ್ಲ’ ಎಂದು ಯತ್ನಾಳ ಅವರು ಸಚಿವ ಮುರುಗೇಶ ನಿರಾಣಿ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.