ಬೆಂಗಳೂರು:‘ಅನಾರೋಗ್ಯದ ನೆಪವೊಡ್ಡಿ ಎಸ್‌ಐಟಿ ತನಿಖೆಗೆ ಸಹಕರಿಸದಅತ್ಯಾಚಾರ ಪ್ರಕರಣದ ಆರೋಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಂತ್ರಸ್ತ ಯುವತಿ ಪರ ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಕೆ.ಎನ್.ಜಗದೀಶ್ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಪತ್ರ ಬರೆದಿದ್ದಾರೆ.
‘ಸಂತ್ರಸ್ತೆಯನ್ನು ಹಲವು ಬಾರಿ ವಿಚಾರಣೆ ನಡೆಸಿರುವ ತನಿಖಾಧಿಕಾರಿಗಳು ಆರೋಪಿಯ ವಿಚಾರಣೆಗೆ ವಿನಾಯಿತಿ ನೀಡಿದಂತಿದೆ. ‘ವಿಚಾರಣೆಗೆ ಬರಬೇಕಿದ್ದ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಗೋಕಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸಚಿವ ಬೈರತಿ ಬಸವರಾಜು ಹೇಳುತ್ತಾರೆ. ಅಲ್ಲದೇ, ರಮೇಶ ಅವರಿಗೆ ಆರೋಗ್ಯ ಸಚಿವ ಕೆ.ಸುಧಾಕರ್ ಸ್ನೇಹಿತರಾಗಿದ್ದು, ಅವರ ಪ್ರಭಾವ ಬಳಸಿ, ಆಸ್ಪತ್ರೆ ಸಿಬ್ಬಂದಿ ಮೇಲೆ ಒತ್ತಡ ಹೇರಿ, ಕೊರೊನಾ ಪಾಸಿಟಿವ್ ನಕಲಿ ವರದಿ ಹಾಗೂ ಐಸಿಯುನಲ್ಲಿ ಚಿಕಿತ್ಸೆಯ ನಾಟಕ ಆಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ರಮೇಶ ಅವರಿಗೆ ನಿಜವಾಗಿ ಸೋಂಕು ತಗುಲಿರುವುದನ್ನು ಪರಿಶೀಲಿಸಲು ವೈದ್ಯರ ತಂಡವನ್ನು ಕಳುಹಿಸಿ ವರದಿ ಪಡೆಯಬೇಕು. ತನ್ನ ಪ್ರಭಾವ ಬಳಸಿ, ತನಿಖೆಯ ದಿಕ್ಕು ತಪ್ಪಿಸುತ್ತಿರುವ ರಮೇಶ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.