ADVERTISEMENT

ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ರಾಜ್ಯಕ್ಕೆ ಪರಿಹಾರ: ಅನುರಾಗ್ ಸಿಂಗ್ ಠಾಕೂರ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 10:22 IST
Last Updated 28 ಸೆಪ್ಟೆಂಬರ್ 2019, 10:22 IST
ಅನುರಾಗ್ ಸಿಂಗ್ ಠಾಕೂರ್
ಅನುರಾಗ್ ಸಿಂಗ್ ಠಾಕೂರ್   

ಹುಬ್ಬಳ್ಳಿ: ‘ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಯುತ ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಲಿದೆ’ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರ ನೀಡುವುದು ವಿಳಂಬವಾಗುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಪರಿಹಾರ ಘೋಷಣೆಯಾಗಲಿದೆ ಎಂದರು.

ಕಾರ್ಪೋರೇಟ್ ತೆರಿಗೆಯನ್ನು ಇಳಿಸಲಾಗಿದೆ. 2020 ಮಾರ್ಚ್‌ 31ರ ವರೆಗೆ ಬಿಎಸ್‌4 ಶ್ರೇಣಿಯ ಕಾರುಗಳ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದರು.ಆರ್ಥಿಕತೆಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದ್ದು, ಕೈಗಾರಿಕೋದ್ಯಮಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಅವರ ಅಭಿಪ್ರಾಯಗಳನ್ನು ಕೇಳಲಾಗುತ್ತಿದೆ.

ADVERTISEMENT

ವಾಹನ ನೋಂದಣಿ ಶುಲ್ಕ ಪರಿಷ್ಕರಣೆಯನ್ನು 2020ಕ್ಕೆ ಮುಂದೂಡಲಾಗಿದೆ. ಮಾರುಕಟ್ಟೆಯಲ್ಲಿ ಬಿರುಸು ತರಲು ಸಾಲದ ಮೇಲಿನ ಬಡ್ಡಿ ದರವನ್ನ ಕಡಿತ ಮಾಡಲಾಗಿದ್ದು, ಅದರ ಲಾಭ ಗ್ರಾಹಕರಿಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ. ಎರಡು ಹಂತದಲ್ಲಿ ಸಾಲ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿ ಪುನರ್ಧನ ನೀಡಲಾಗಿದೆ ಎಂದರು.

ಈಗಾಗಲೇ ಸಾಲ ಪಡೆದಿರುವ ವ್ಯಕ್ತಿಗೆ ಎರಡನೇ ಬಾರಿಗೆ ಸಾಲ ನೀಡುವುದಾದರೆ 5 ಮಂದಿ ಹೊಸ ಗ್ರಾಹಕರಿಗೆ ಸಾಲ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಶೇ90 ರಷ್ಟು ಜಿಎಸ್‌ಟಿ ಮರುಪಾವತಿ ಮಾಡಲಾಗಿದೆ. ಆದಾಯ ತೆರಿಗೆ ಮೌಲ್ಯಪಾನವನ್ನು ಪಾರದರ್ಶಕವಾಗಿ ಮಾಡಲು ಸಹ ಕ್ರಮ ಕೈಗೊಳ್ಳಲಾಗಿದ್ದು, ಕಾಶ್ಮೀರದಲ್ಲಿ ಫೈಲ್ ಮಾಡಿದ ರಿಟರ್ನ್ಸ್‌ ಅನ್ನು ಕನ್ಯಾಕುಮಾರಿಯ ಕಚೇರಿ ಅಧಿಕಾರಿ ಮೌಲ್ಯ ಮಾಪನ ಮಾಡುತ್ತಾರೆ ಎಂದರು.

ಉದ್ಯೋಗ ಹೆಚ್ಚಳಕ್ಕೆ ಕ್ರಮ: ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಮೂಲಕ ಉದ್ಯೋಗ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಕೃಷಿಕರ ಆದಾಯ ಹೆಚ್ಚಳದ ಗುರಿ ಸಾಧನೆಗೆ ಕಿಸಾನ್ ಸಮ್ಮಾನ್‌, ಮಣ್ಣು ಪರೀಕ್ಷೆಯಂತ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ವಿಶ್ವದ ಅತಿದೊಡ್ಡ ಆರ್ಥಿಕತೆಯೂ ಆಗಬೇಕು ಎಂಬುದು ಗುರಿಯಾಗಿದೆ. ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್‌ಗೆ ಏರಿಸಲಾಗುತ್ತದೆ. ಬಿಜೆಪಿ ಆಡಳಿತದ ಮೊದಲ ಅವಧಿಯಲ್ಲಿ 1 ಟ್ರಿಲಿಯನ್‌ನಷ್ಟು ಏರಿಕೆಯಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.