ಬೆಂಗಳೂರು: ‘ಶಾಲೆಗಳಿಗೆ ಬಾಂಬ್ ಬೆದರಿಕೆ ಬಗ್ಗೆ ಕೇಂದ್ರ ಏಜೆನ್ಸಿ ಗಂಭೀರವಾಗಿ ತನಿಖೆ ನಡೆಸುತ್ತಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮುಳಬಾಗಿಲಿನಲ್ಲಿ ಶೋಭಾಯಾತ್ರೆ ನಡೆಯುವಾಗ ವಿದ್ಯುತ್ ಕಡಿತ ಆಗಿತ್ತು. ಆ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಯ ಖಾತೆಯಿಂದ ಅಧಿಕಾರಿಗಳು ಹಣ ಪಡೆದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಷಯವನ್ನು ಖಂಡಿತವಾಗಿಯೂ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಯಾರೇ ಅಧಿಕಾರಿಗಳು ಇದರ ಹಿಂದೆ ಇದ್ದರೂ ಕ್ರಮ ಕೈಗೊಳ್ಳುತ್ತೇನೆ’ ಎಂದರು.
‘ಈ ಆರೋಪ ಬಹಳ ದಿನಗಳಿಂದ ಇದೆ. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ. ಈಗ ಸ್ವಲ್ಪ ಕಡಿಮೆ ಆಗಿದೆ. ಈಗ ಮತ್ತೆ ಸುದ್ದಿ ಆಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಜೆಜೆ ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣದಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಗೃಹ ಸಚಿವರ ವಿರುದ್ಧ ಕಾಂಗ್ರೆಸ್ ದೂರು ನೀಡಲು ನಿರ್ಧರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ತುರ್ತು ಪರಿಸ್ಥಿತಿಯ ದಿನಗಳಲ್ಲಿ ನಮ್ಮನ್ನು ಜೈಲಿನಲ್ಲಿ ಇಟ್ಟಿದ್ದರು. ಜಾರ್ಜ್ ಫರ್ನಾಂಡಿಸ್, ವಾಜಪೇಯಿ ಸೇರಿದಂತೆ ಅನೇಕರನ್ನು ಜೈಲಿನಲ್ಲಿ ಇಟ್ಟಿದ್ದರು. ಈಗ ಅವರ ಕೈಯಲ್ಲಿ (ಕಾಂಗ್ರೆಸ್) ಏನೂಇಲ್ಲ. ಹೀಗಾಗಿ ಬರೀ ದೂರು ಕೊಡುತ್ತಿದ್ದಾರೆ. ಕೊಡಲಿ, ಕಾನೂನು ಪ್ರಕಾರ ಕ್ರಮ ಆಗಲಿ’ ಎಂದರು.
ಇದನ್ನೂ ಓದಿ.. ಬೆಂಗಳೂರಿನ ಕೆಲ ಶಾಲೆಗಳಿಗೆ ಬಾಂಬ್ ಬೆದರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.