ADVERTISEMENT

KAS ಅಧಿಕಾರಿ ಜೆ. ಉಮೇಶ್‌ ವಿರುದ್ಧ ಪ್ರಕರಣಕ್ಕೆ ಕೇಂದ್ರ ಅರಣ್ಯ ಇಲಾಖೆ ನಿರ್ದೇಶನ

ಕಡೂರಿನ ಹುಲಿ ಸಂರಕ್ಷಿತ ಪ್ರದೇಶದ 14 ಎಕರೆ ಅಕ್ರಮ ಮಂಜೂರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 0:31 IST
Last Updated 23 ಡಿಸೆಂಬರ್ 2023, 0:31 IST
   

ನವದೆಹಲಿ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಎಮ್ಮೆದೊಡ್ಡಿಯಲ್ಲಿ 14 ಎಕರೆ ಜಾಗವನ್ನು ನಾಲ್ಕು ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿರುವ ಹಿಂದಿನ ತಹಶೀಲ್ದಾರ್‌ ಜೆ. ಉಮೇಶ್‌ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅರಣ್ಯ ಇಲಾಖೆಗೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ನಿರ್ದೇಶನ ನೀಡಿದೆ. 

ಈ ಸಂಬಂಧ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಸಚಿವಾಲಯದ ಉಪ ಮಹಾನಿರ್ದೇಶಕರು (ಅರಣ್ಯ), ‘ಸದ್ಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿರುವ (ಅಮಾನತಿನಲ್ಲಿದ್ದಾರೆ) ಉಮೇಶ್‌ ನಿಯಮಬಾಹಿರವಾಗಿ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಮಂಜೂರು ಮಾಡಿದ್ದಾರೆ ಎಂದು ರಾಜ್ಯ ಸರ್ಕಾರ ವರದಿ ನೀಡಿದೆ. ಅಧಿಕಾರಿ ವಿರುದ್ದ 45 ದಿನಗಳೊಳಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕು. ಈ ಸಂಬಂಧ ಸಚಿವಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ. 

ಸರ್ಕಾರಿ ಜಮೀನನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿರುವ ಆರೋಪದಲ್ಲಿ ಜೆ.ಉಮೇಶ್ ಅವರನ್ನು ಪೊಲೀಸರು ತಿಂಗಳುಗಳ ಹಿಂದೆ ಬಂಧಿಸಿದ್ದರು. ಇದರ ಬೆನ್ನಲ್ಲೇ ಇವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶಿಸಿತ್ತು. ಉಮೇಶ್‌ ಅವರು 2019ರಿಂದ 2023ರವರೆಗೆ ಕಡೂರು ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.