
ಹೆದ್ದಾರಿ
ನವದೆಹಲಿ: ಕರ್ನಾಟಕದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬಗತಿಯಲ್ಲಿ ಸಾಗುತ್ತಿದೆ ಎಂಬ ಕಾರಣ ನೀಡಿ 2025–26ನೇ ಸಾಲಿನ ರಾಷ್ಟ್ರೀಯ ಹೆದ್ದಾರಿ ಕ್ರಿಯಾಯೋಜನೆಗೆ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ಅನುಮೋದನೆ ನೀಡದೆ ತಡೆ ಹಿಡಿದಿದೆ.
₹5,536 ಕೋಟಿ ವೆಚ್ಚದಲ್ಲಿ 764 ಕಿ.ಮೀ. ಉದ್ದದ 27 ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಲೋಕೋಪಯೋಗಿ ಇಲಾಖೆಯು ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ 2025ರ ಮಾರ್ಚ್‌ನಲ್ಲಿ ಸಲ್ಲಿಸಿತ್ತು. ಕ್ರಿಯಾಯೋಜನೆಗೆ ಇಲ್ಲಿಯವರೆಗೆ ಒಪ್ಪಿಗೆ ನೀಡಿಲ್ಲ. ಈ ಆರ್ಥಿಕ ವರ್ಷ ಮುಗಿಯಲು ಎರಡೂವರೆ ತಿಂಗಳಷ್ಟೇ ಉಳಿದಿದೆ.
ರಾಜ್ಯದ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಸಂಬಂಧ ಹೆದ್ದಾರಿ ಸಚಿವಾಲಯವು 2025ರ ಏಪ್ರಿಲ್ 2 ಹಾಗೂ ಜುಲೈ 18ರಂದು ಪ್ರಗತಿ ಪರಿಶೀಲನಾ ಸಭೆ ನಡೆಸಿತ್ತು. ರಾಜ್ಯಕ್ಕೆ ಈಗಾಗಲೇ ಅನುಮೋದಿಸಿರುವ ಹಲವಾರು ಯೋಜನೆಗಳು ಭೂಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದಾಗಿ ಪ್ರಗತಿ ಸಾಧಿಸಿಲ್ಲ ಎಂದು ಹೆದ್ದಾರಿ ಸಚಿವಾಲಯದ ಉನ್ನತ ಅಧಿಕಾರಿಗಳು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಭೂಸ್ವಾಧೀನ ಪ್ರಕ್ರಿಯೆ ಬೇಗ ಮುಗಿಸದಿದ್ದರೆ ರಾಜ್ಯದ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡುವುದಿಲ್ಲ ಎಂದೂ ಎಚ್ಚರಿಸಿದ್ದರು.
ಆ ಬಳಿಕ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಕ್ರಿಯಾಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯಯ್ಯ ಅವರೂ ವಿಷಯ ಪ್ರಸ್ತಾಪಿಸಿದ್ದರು. ಹೆದ್ದಾರಿ ಸಚಿವಾಲಯಕ್ಕೆ ಲೋಕೋಪಯೋಗಿ ಇಲಾಖೆಯು ನಾಲ್ಕು ಸಲ ಪತ್ರ ಬರೆದಿತ್ತು. ಆದರೆ, ಹೆದ್ದಾರಿ ಸಚಿವಾಲಯವು ತನ್ನ ನಿಲುವು ಬದಲಿಸಿಲ್ಲ.
‘ರಾಜ್ಯದಲ್ಲಿ ಭೂಸ್ವಾಧೀನ ಹಾಗೂ ಅರಣ್ಯ ಭೂಮಿ ತೀರುವಳಿ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ದೇಶದಲ್ಲಿ ಅತ್ಯಂತ ನಿಧಾನವಾಗಿ ಭೂಸ್ವಾಧೀನ ನಡೆಯುವುದೇ ಕರ್ನಾಟಕದಲ್ಲಿ. ಈ ಬಗ್ಗೆ ರಾಜ್ಯಕ್ಕೆ ಹಲವು ಸಲ ಎಚ್ಚರಿಕೆ ನೀಡಲಾಗಿತ್ತು. ಆದರೂ, ಪರಿಸ್ಥಿತಿ ಸುಧಾರಣೆ ಆಗಿಲ್ಲ. ಹೀಗಾಗಿ, ಕ್ರಿಯಾಯೋಜನೆಗೆ ಅನುಮೋದನೆ ನೀಡಿಲ್ಲ. ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ತಡೆ ಒಡ್ಡಿಲ್ಲ’ ಎಂದು ಹೆದ್ದಾರಿ ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ.
ನೆರೆಯ ಮಹಾರಾಷ್ಟ್ರದಲ್ಲಿ ಕಳೆದೊಂದು ದಶಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಇದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ತವರು ರಾಜ್ಯದ ಮೇಲಿನ ಅತಿ ಪ್ರೀತಿಯೇ ಕಾರಣ.
ಮಹಾರಾಷ್ಟ್ರದಲ್ಲಿ 2005ರಲ್ಲಿ 4,176 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದ್ದರೆ, 2014ರಲ್ಲಿ 6,249 ಕಿ.ಮೀ.ಗೆ ಏರಿತ್ತು. 2024ರ ವೇಳೆಗೆ ಹೆದ್ದಾರಿ 18,462 ಕಿ.ಮೀ.ಗೆ ಜಿಗಿದಿದೆ. ಆದರೆ, ಕರ್ನಾಟಕದಲ್ಲಿ 2005ರಲ್ಲಿ 3,843 ಕಿ.ಮೀ. ಹೆದ್ದಾರಿ ಇತ್ತು. 2024ರಲ್ಲಿ 8,191 ಕಿ.ಮೀ.ಗೆ ಏರಿದೆ. ಹೆದ್ದಾರಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಎನ್‌ಡಿಎ ಅವಧಿಗಿಂತ ಯುಪಿಎ ಅವಧಿಯಲ್ಲೇ ಹೆಚ್ಚು ಯೋಜನೆಗಳು ಕಾರ್ಯಗತವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.