
ನವದೆಹಲಿ: ಎಫ್‌ಸಿವಿ ತಂಬಾಕು ಮೇಲೆ ವಿಧಿಸಲಾಗಿದ್ದ ಶೇಕಡ 18ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ.
ಈ ತಂಬಾಕಿನ ಮೇಲೆ ಶೇಕಡ 18ರಷ್ಟು ಅಬಕಾರಿ ಸುಂಕ ವಿಧಿಸಿದ್ದರಿಂದ ಖರೀದಿದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದರು. ಇದರಿಂದ ಬೆಳೆದ ಬೆಳೆ ಮಾರಾಟವಾಗದೆ ಕರ್ನಾಟಕದ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ಅರಕಲಗೂಡು ಸೇರಿದಂತೆ ವಿವಿಧ ಭಾಗಗಳಲ್ಲಿನ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಗುರಿಯಾಗಿದ್ದರು.
ಬೆಳೆಗಾರರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಸಂಕಷ್ಟ ತೋಡಿಕೊಂಡಿದ್ದರು. ಈ ಸಂಬಂಧ ಸಚಿವರು ಬೆಂಗಳೂರಿನ ತಂಬಾಕು ಮಂಡಳಿ ವ್ಯಸ್ಥಾಪಕ ನಿರ್ದೇಶಕರು ಮತ್ತು ವಿಶಾಖಪಟ್ಟಣ ವಿಭಾಗದ ಕೇಂದ್ರೀಯ ಅಬಕಾರಿ ಮತ್ತು ಜಿಎಸ್‌ಟಿ ಮುಖ್ಯ ಆಯುಕ್ತರ ಜತೆ ನಡೆಸಲಾಗಿದ್ದ ಪತ್ರ ವ್ಯವಹಾರಗಳ ಕುರಿತ ಎಲ್ಲ ಮಾಹಿತಿ ಪಡೆದುಕೊಂಡಿದ್ದರು.
ಈ ಸಂಬಂಧ ಫೆಬ್ರುವರಿ 1ರಂದು ಆದೇಶ ಹೊರಡಿಸಿರುವ ತಂಬಾಕು ಮಂಡಳಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಬಕಾರಿ ಸುಂಕ ಹಿಂಪಡೆಯಲಾಗಿದೆ ಎಂದು ತಿಳಿಸಿದೆ ಹಾಗೂ ಫೆಬ್ರುವರಿ 5ರಿಂದಲೇ ಹರಾಜು ಪ್ರಕ್ರಿಯೆ ಆರಂಭ ಮಾಡುವಂತೆ ನಿರ್ದೇಶನ ನೀಡಿದೆ.
ತಂಬಾಕು ಮೇಲೆ ಅಬಕಾರಿ ಸುಂಕ ಮತ್ತು ಜಿಎಸ್‌ಟಿ ದರ ಏರಿಕೆ ವಿರೋಧಿಸಿ ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ಖರೀದಿ ಕಂಪನಿಗಳು ನಿರ್ಧರಿಸಿದ್ದವು. ಇದರಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಂಡು ಮಾರುಕಟ್ಟೆ ಬಂದ್ ಆಗಿದ್ದವು. ರೈತರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದರು.
ಖರೀದಿ ಕಂಪನಿಗಳು ತಮ್ಮ ಮೇಲೆ ವಿಧಿಸಿರುವ ಅನುತ್ಪಾದಕ ತಂಬಾಕಿಗೆ ಅಬಕಾರಿ ಸುಂಕ ಹಾಗೂ ತಂಬಾಕು ಉತ್ಪನ್ನಗಳಿಗೆ ಜಿಎಸ್‌ಟಿ ಏರಿಕೆಯ ಕಾರಣದಿಂದ ತಂಬಾಕು ಖರೀದಿ ಕಂಪನಿಗಳು ತಾತ್ಕಾಲಿಕವಾಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.