ADVERTISEMENT

ಜಿಮ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆ ತರಲು ಒತ್ತು: ಮುರುಗೇಶ ನಿರಾಣಿ

ಕಿತ್ತೂರು, ಕಲಬುರಗಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 11:43 IST
Last Updated 28 ಅಕ್ಟೋಬರ್ 2022, 11:43 IST
ಕೈಗಾರಿಕೆ ಸಚಿವ ಮುರುಗೇಶ ನಿರಾಣಿ
ಕೈಗಾರಿಕೆ ಸಚಿವ ಮುರುಗೇಶ ನಿರಾಣಿ   

ಹುಬ್ಬಳ್ಳಿ: ‘ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ, ಹುಬ್ಬಳ್ಳಿ ಮತ್ತು ಬೆಳಗಾವಿ ಮಧ್ಯೆ ಇರುವ ಕಿತ್ತೂರು ಮತ್ತು ಕಲಬುರಗಿಯಲ್ಲಿ ಮೂರು ಸಾವಿರ ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾಡೇ ಮಾಡುತ್ತೇವೆ’ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.

‘ಎರಡನೇ ಹಂತದ ನಗರಗಳಿಗೆ ಉದ್ಯಮಗಳು ಬರಬೇಕಾದರೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ಮೂಲಸೌಕರ್ಯಗಳು ಅಗತ್ಯ. ಇದಕ್ಕಾಗಿ ರಾಜ್ಯ ಸರ್ಕಾರ ದಾವಣಗೆರೆ, ಬಾಗಲಕೋಟೆಯ ಬಾದಾಮಿ, ರಾಯಚೂರು, ಕೊಪ್ಪಳ ಹಾಗೂ ಚಿಕ್ಕಮಗಳೂರಿನಲ್ಲಿ ದೇಶಿಯ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಮುಂದಾಗಿದೆ. ‌ಮುಂದಿನ 18 ತಿಂಗಳಲ್ಲಿ ನಿಲ್ದಾಣಗಳು ಪೂರ್ಣಗೊಳ್ಳಲಿವೆ’ ಎಂದು ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ತರ ಕರ್ನಾಟಕಕ್ಕೆ ಒತ್ತು: ‘ಬೆಂಗಳೂರಿನಲ್ಲಿ ನ. 2ರಿಂದ 4ರವರೆಗೆ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್) ₹5 ಲಕ್ಷ ಕೋಟಿ ಹೂಡಿಕೆಯೊಂದಿಗೆ 5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇವೆ. ಇದರಲ್ಲಿ, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆ ತರಲು ಒತ್ತು ನೀಡಲಾಗುವುದು. ಬೆಂಗಳೂರು ಹೊರತುಪಡಿಸಿದ ನಗರಗಳಿಗೆ ಬರುವ ಕೈಗಾರಿಕೆಗಳಿಗೆ ಸರ್ಕಾರ ರಿಯಾಯಿತಿ ಜೊತೆಗೆ, ಹಲವು ಸೌಕರ್ಯಗಳನ್ನು ನೀಡುತ್ತಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ 50 ಸಾವಿರ ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಈ ಪೈಕಿ, 20 ಸಾವಿರ ಎಕರೆಯನ್ನು ಬೆಂಗಳೂರು ಹೊರವಲಯದಲ್ಲಿ ಮತ್ತು ಉಳಿದದ್ದನ್ನು ಬೇರೆ ಜಿಲ್ಲೆಗಳಲ್ಲಿ ಕಾಯ್ದಿರಿಸಲಾಗಿದೆ. ಕರ್ನಾಟಕವು ವಿದೇಶಿ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೋವಿಡ್–19 ಬಳಿಕ, ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸುತ್ತಿರುವ ಮೊದಲ ರಾಜ್ಯ ನಮ್ಮದು’ ಎಂದು ಸಂತಸ ವ್ಯಕ್ತಪಡಿಸಿದರು.

‘ಪ್ರಚಾರಕ್ಕಾಗಿ ಸಚಿವರು ಕಿತ್ತೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ’ ಎಂದು ಶಾಸಕ ಜಗದೀಶ ಶೆಟ್ಟರ್ ಇತ್ತೀಚೆಗೆ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಿರಾಣಿ, ‘ಹಿರಿಯರಾದ ಶೆಟ್ಟರ್ ಅವರು ಯಾವ ಉದ್ದೇಶದಿಂದ ಆ ರೀತಿ ಹೇಳಿದ್ದಾರೊ ಗೊತ್ತಿಲ್ಲ. ಆದರೆ, ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಂತು ಖಚಿತ. ಈ ಬಗ್ಗೆ ಅವರೊಂದಿಗೆ ಮಾತನಾಡುವೆ’ ಎಂದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ ಮಾತನಾಡಿ, ‘ಹುಬ್ಬಳ್ಳಿಯ ಎಫ್‌ಎಂಸಿಜಿ ಕ್ಲಸ್ಟರ್‌ನಿಂದಾಗಿ ಅವಳಿನಗರದ ಜಿಡಿಪಿ ಶೇ 20ರಷ್ಟು ಏರಿಕೆಯಾಗಲಿದೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾಭಿವೃದ್ಧಿಗೆ ಈ ಕ್ಲಸ್ಟರ್ ಮುನ್ನುಡಿ ಬರೆಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.