ADVERTISEMENT

ಈ ಚುನಾವಣೆ ಸ್ವಾಭಿಮಾನ–ಗಾಂಧಿ ಕುಟುಂಬದ ನಡುವಿನ ಹೋರಾಟ: ಸ್ಮೃತಿ ಇರಾನಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 23:42 IST
Last Updated 16 ಮಾರ್ಚ್ 2023, 23:42 IST
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗುರುವಾರ ಗದಗ ನಗರದಲ್ಲಿ ರೋಡ್‌ ಶೋ ನಡೆಸಿದರು
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗುರುವಾರ ಗದಗ ನಗರದಲ್ಲಿ ರೋಡ್‌ ಶೋ ನಡೆಸಿದರು   

ಗದಗ: ‘ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸ್ವಾಭಿಮಾನ ಇದ್ದರೆ, ಈ ಮಣ್ಣಿನ ಮೇಲೆ ಪ್ರೀತಿ ಇದ್ದರೆ ರಾಹುಲ್ ಗಾಂಧಿಯನ್ನು ವಿರೋಧಿಸಬೇಕು’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.

ಗದಗ ನಗರದಲ್ಲಿ ಗುರುವಾರ ಬೃಹತ್‌ ಶೋ ನಡೆಸಿದ ಅವರು ಮಾರ್ಗ ಮಧ್ಯೆ ಮಾತನಾಡಿ, ‘ಒಂದು ಕಡೆ ಮಾತೃಭೂಮಿಯನ್ನು ತಾಯಿ ಅಂತ ಬಿಜೆಪಿ ಪೂಜಿಸುತ್ತದೆ. ಮತ್ತೊಂದು ಕಡೆ ರಾಷ್ಟ್ರದ ಹೊರಗೆ ನಿಂತು ಕಾಂಗ್ರೆಸ್‌ ದೇಶದ ನಿಂದನೆ ಮಾಡುತ್ತದೆ. ರಾಜ್ಯದಲ್ಲಿ ನಡೆಯುವ ಚುನಾವಣೆ ರಾಜ್ಯಕ್ಕೆ ಮಾತ್ರ ಸಂಬಂಧಿಸಿಲ್ಲ; ಇದೊಂದು ರಾಷ್ಟ್ರದ ಸ್ವಾಭಿಮಾನ ಮತ್ತು ರಾಷ್ಟ್ರಕ್ಕೆ ಅಪಮಾನ ಮಾಡುವ ರಾಹುಲ್ ಗಾಂಧಿಯ ಕುಟುಂಬದ ನಡುವಿನ ಹೋರಾಟವಾಗಿದೆ’ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಪ್ರತಿಭಟನೆ: ಸ್ಮೃತಿ ಇರಾನಿ ಅವರು ರೋಡ್‌ ಶೋ ನಡೆಸುವ ವೇಳೆ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ADVERTISEMENT

ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದರು.

'ರಾಹುಲ್‌ಗೆ ಸೋನಿಯಾ ಸಂಸ್ಕಾರ ಕಲಿಸಿಲ್ಲ'
ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘ವಿದೇಶದಲ್ಲಿ ದೇಶದ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅವರ ತಾಯಿ ಸೋನಿಯಾ ಗಾಂಧಿ ಸಂಸ್ಕಾರವನ್ನೇ ಕಲಿಸಿಲ್ಲ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ಧಾಳಿ ನಡೆಸಿದರು.

ಪಟ್ಟಣದ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಗುರುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಜನ್ಮ ನೀಡಿದ ತಾಯಿಗಿಂತ ಜನ್ಮಭೂಮಿ ದೊಡ್ಡದು. ದೇಶದ ಕುರಿತು ಎಳ್ಳಷ್ಟೂ ಗೌರವ ಇಟ್ಟುಕೊಳ್ಳದ ರಾಹುಲ್ ಗಾಂಧಿ ಅವರು ಭಾರತವನ್ನು ವಸಾಹತು ಮಾಡಿಕೊಂಡವರ ನೆಲದಲ್ಲಿ ದೇಶದ ಮಾನವನ್ನು ವಿಶ್ವದ ಮುಂದೆ ಹರಾಜು ಹಾಕಿದ್ದಾರೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.