ADVERTISEMENT

ಕೇಂದ್ರ ಯೋಜನೆ ವಿರುದ್ಧ ಅಧಿವೇಶನ ವ್ಯರ್ಥ: ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 16:15 IST
Last Updated 21 ಜನವರಿ 2026, 16:15 IST
<div class="paragraphs"><p>ಆರ್. ಅಶೋಕ</p></div>

ಆರ್. ಅಶೋಕ

   

ಬೆಂಗಳೂರು: ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನ ಮಾಡುತ್ತಿದೆ. ಯೋಜನೆ ವಿರುದ್ಧದ ನಿರ್ಣಯದಿಂದ ಯಾವುದೇ ಪ್ರಯೋಜನವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಶೇಷ ಅಧಿವೇಶನದಲ್ಲಿ ವಿಬಿ–ಜಿ ರಾಮ್‌ ಜಿ ಯೋಜನೆಯ ವಿರುದ್ಧ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಸರ್ಕಾರದ ಇಂತಹ ಧೋರಣೆಯಿಂದ ರಾಜ್ಯಕ್ಕೆ ಏನು ಪ್ರಯೋಜನ? ಸರ್ಕಾರಕ್ಕೆ ಅಧಿವೇಶನ ನಡೆಸುವ ಅಗತ್ಯ ಇರಲಿಲ್ಲ. ಸಚಿವರು, ಪ್ರಧಾನಮಂತ್ರಿ ಅವರನ್ನು ನೇರವಾಗಿ ಭೇಟಿ ಮಾಡಬಹುದಿತ್ತು. ಅಧಿವೇಶನದ ನಿರ್ಣಯಗಳಿಂದ ಆಡಳಿತಾತ್ಮಕ ಪ್ರಯೋಜನ ಆಗುವುದಿಲ್ಲ. ಇಂತಹ ವಿಷಯಗಳಲ್ಲಿ ರಾಜಕೀಯ ಮಾಡಬಾರದು ಎಂದರು. 

ADVERTISEMENT

ಯೋಜನೆ ಕುರಿತು ಅರಿವು ಮೂಡಿಸಲು ಎಲ್ಲ ಶಾಸಕರು, ಮುಖಂಡರ ಜತೆ ಸಭೆ ನಡೆಸಲಾಗುತ್ತದೆ. ಈ ಬಗ್ಗೆ ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಪತ್ರ ಬರೆದಿದ್ದು, ಅವರೂ ಸೇರಿದಂತೆ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ನರೇಗಾ ಯೋಜನೆಯಲ್ಲಿ ಸಾವಿರಾರು ಕೋಟಿ ಮೊತ್ತದ ಅಕ್ರಮ ನಡೆದಿದೆ. ಸಿಎಜಿ ವರದಿಯಲ್ಲೂ ಸಾಬೀತಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಜಿ ರಾಮ್‌ ಜಿಯಲ್ಲಿ ಹಲವು ಬದಲಾವಣೆ ತರಲಾಗಿದೆ. ಕೇಂದ್ರ ಮತ್ತು ರಾಜ್ಯದ ಪಾಲನ್ನು 60:40ರ ಅನುಪಾತದಲ್ಲಿ ನಿಗದಿ ಮಾಡಲಾಗಿದೆ. ಅನುದಾನವನ್ನೂ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.