
ಉತ್ಪಾದನೋತ್ತರ ಕೃಷಿ ಪರಿಕಲ್ಪನೆಯ ವಸ್ತು ಪ್ರದರ್ಶನದಲ್ಲಿ ಚಲುವರಾಯಸ್ವಾಮಿ, ಶಿವರಾಜ್ ಸಿಂಗ್ ಚೌಹಾಣ್ ಜೇನನ್ನು ಸವಿದರು. ಕೃಷಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ವಿವಿಧ ಬೆಳೆಗಳ ವಿಚಾರದಲ್ಲಿ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನ ಕಾಯ್ದುಕೊಂಡಿದೆ. ರಾಜ್ಯದಲ್ಲಿ ಕೃಷಿ ವಲಯವನ್ನು ಇನ್ನಷ್ಟು ಅಭಿವೃದ್ಧಿಪಡಿಸುವಲ್ಲಿ ಮೌಲ್ಯವರ್ಧನೆಗೆ ಒತ್ತು ನೀಡಬೇಕಿದ್ದು, ಕೇಂದ್ರ ಸರ್ಕಾರವು ಅದಕ್ಕೆ ಬೆಂಬಲ ನೀಡಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ರಾಜ್ಯ ಕೃಷಿ ಇಲಾಖೆಯು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಉತ್ಪಾದನೋತ್ತರ ಕೃಷಿ ಪರಿಕಲ್ಪನೆಯ ‘ಅಂತರರಾಷ್ಟ್ರೀಯ ವಾಣಿಜ್ಯ ಮೇಳ’ದಲ್ಲಿ ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಆರಂಭವಾದ ಸಿರಿಧಾನ್ಯ ಪರಿಕಲ್ಪನೆ ಈಗ ಇಡೀ ಜಗತ್ತಿನಲ್ಲಿ ಖ್ಯಾತವಾಗಿದೆ. ಇಲ್ಲಿನ ಕಾಫಿ, ತೆಂಗು, ಕೋಕೊ ಮತ್ತಿತರ ಬೆಳೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಆದರೆ ರಾಜ್ಯದ ಉತ್ತರ ಭಾಗದಲ್ಲಿ ತೊಗರಿಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಮೌಲ್ಯವರ್ಧನೆಯ ಕೊರತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ರೈತರು ಯೋಚನೆ ಮಾಡಬೇಕು. ನಿಮ್ಮೊಂದಿಗೆ ನಾವು ನಿಲ್ಲುತ್ತೇವೆ’ ಎಂದರು.
‘ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳನ್ನು ಅಭಿವೃದ್ಧಿಪಡಿಸಬೇಕು. ಅಂತಹ ತಳಿಗಳು ಇದ್ದರೆ, ರೈತರು ಅವುಗಳನ್ನು ಸಂಸ್ಕರಿಸಿ ಜತನ ಮಾಡಬೇಕು. ಇದಕ್ಕಾಗಿ ಬೀಜ ಗ್ರಾಮಗಳನ್ನು ಸ್ಥಾಪಿಸಬೇಕು. ಈ ಕಾರ್ಯದಲ್ಲಿ ತೊಡಗುವ ರೈತರಿಗೆ ₹10,000 ಪ್ರೋತ್ಸಾಹಧನ ನೀಡಲಾಗುವುದು’ ಎಂದು ಘೋಷಿಸಿದರು.
‘ಕರ್ನಾಟಕದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವಿಸ್ತರಣೆಗೆ ಕ್ರಮ ತೆಗದುಕೊಳ್ಳಲಿದೆ. ಇದರಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಬೆಂಬಲ ನೀಡಲಿದೆ. ತೊಗರಿ ಬೆಳೆಯುವ ಪ್ರದೇಶದಲ್ಲಿ ಸಂಸ್ಕರಣ ಘಟಕ ಮತ್ತು ಬೇಳೆ ಒಡೆಯುವ ಮಿಲ್‌ಗಳ ಸ್ಥಾಪನೆಗೆ ಒತ್ತು ನೀಡಿ’ ಎಂದರು.
ಅನುಮೋದನಾ ಪತ್ರ ಹಸ್ತಾಂತರ: ‘2026–27ನೇ ಸಾಲಿನ ಬಜೆಟ್‌ನಲ್ಲಿ ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆಯ ಭಾಗವಾಗಿ ರಾಜ್ಯಕ್ಕೆ ₹191.67 ಕೋಟಿ ಹಂಚಿಕೆ ಮಾಡಲಾಗುತ್ತಿದೆ. ಇದರಲ್ಲಿ ಶೀಘ್ರವೇ ₹150 ಕೋಟಿಯನ್ನು ಬಿಡುಗಡೆ ಮಾಡುತ್ತೇವೆ’ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಅನುದಾನ ಅನುಮೋದನಾ ಪತ್ರವನ್ನು ಚಲುವರಾಯಸ್ವಾಮಿ ಅವರಿಗೆ ಹಸ್ತಾಂತರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ, ‘ಕೇಂದ್ರದ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಕರ್ನಾಟಕವು ಗಣನೀಯ ಸಾಧನೆ ಮಾಡಿದೆ. ಕೃಷಿ ಕ್ಷೇತ್ರದಲ್ಲಿ ರಫ್ತು ಉತ್ತೇಜನ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ಸರ್ಕಾರದ ನೆರವಿನ ಅಗತ್ಯವಿದೆ ಎಂದರು. ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಉಪಸ್ಥಿತರಿದ್ದರು.
ರೈತರನ್ನು ಕೃಷಿ ಉದ್ಯಮಿಗಳನ್ನಾಗಿಸಲು ಮತ್ತು ಕೃಷಿ ಆರ್ಥಿಕತೆಯನ್ನು ಬಲಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯದ ಅತ್ಯಗತ್ಯಚಲುವರಾಯಸ್ವಾಮಿ ರಾಜ್ಯ ಕೃಷಿ ಸಚಿವ
ರೈತರ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಕರ್ನಾಟಕ ಸರ್ಕಾರ ಮತ್ತು ರೈತರ ಜತೆಗೆ ಕೇಂದ್ರ ಸರ್ಕಾರವು ಹೆಗಲುಕೊಟ್ಟು ನಿಲ್ಲಲಿದೆಶಿವರಾಜ್ ಸಿಂಗ್ ಚೌಹಾಣ್ ಕೇಂದ್ರ ಕೃಷಿ ಸಚಿವ
ಬೆಂಗಳೂರು: ‘ಹೂವು ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ನಮ್ಮ ದೇಶ ಆತ್ಮನಿರ್ಭರವಾಗಬೇಕು’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಗೆ (ಐಐಎಚ್‌ಆರ್) ಭಾನುವಾರ ಭೇಟಿ ನೀಡಿದ ಅವರು ರೈತರು ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
‘ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಮಗ್ರ ಕೃಷಿಯ ಜೊತೆಗೆ ಪಶುಸಂಗೋಪನೆ ಮೀನುಗಾರಿಕೆ ಹಾಗೂ ಜೇನು ಸಾಕಾಣಿಕೆ ಮಾಡಬೇಕು. ಇದರ ಜೊತೆಗೆ ವಿಜ್ಞಾನಿಗಳು ರೈತರಿಗೆ ಹೆಚ್ಚು ಆದಾಯ ತಂದುಕೊಡುವ ಪ್ರಬೇಧಗಳು ಹಾಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು. ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕುರಿತು ರೈತರಿಗೆ ಕಾಲ–ಕಾಲಕ್ಕೆ ತರಬೇತಿ ನೀಡಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.