ADVERTISEMENT

ಜನರ ವಿರುದ್ಧ ಯುದ್ಧ ಸಾರಿದ ಕೇಂದ್ರ: ತೀಸ್ತಾ ಸೆಟಲ್‌ವಾಡ್‌ ಕಳವಳ

‘ಪ.ಮಲ್ಲೇಶ್‌–90’ ರಾಷ್ಟ್ರೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 10:04 IST
Last Updated 1 ಮಾರ್ಚ್ 2024, 10:04 IST
<div class="paragraphs"><p>ಮೈಸೂರಿನ ಕಲಾಮಂದಿರದಲ್ಲಿ ‘ಪ್ರಗತಿಪರ ಸಂಘಟನೆಗಳ ಒಕ್ಕೂಟ’ವು ‘ಪ.ಮಲ್ಲೇಶ್-90’ ಸ್ಮರಣೆ ಪ್ರಯುಕ್ತ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಮಲ್ಲೇಶ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಚಾಲನೆ ನೀಡಿದರು. </p></div>

ಮೈಸೂರಿನ ಕಲಾಮಂದಿರದಲ್ಲಿ ‘ಪ್ರಗತಿಪರ ಸಂಘಟನೆಗಳ ಒಕ್ಕೂಟ’ವು ‘ಪ.ಮಲ್ಲೇಶ್-90’ ಸ್ಮರಣೆ ಪ್ರಯುಕ್ತ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಮಲ್ಲೇಶ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಚಾಲನೆ ನೀಡಿದರು.

   

ಮೈಸೂರು: ‘ಕೇಂದ್ರ ಸರ್ಕಾರವು ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಎಲ್ಲ ಸಮುದಾಯಗಳ ವಿರುದ್ಧವೂ ಯುದ್ಧ ಘೋಷಿಸಿದೆ. ಜನ ಚಳವಳಿಗಳನ್ನು ನಾಶ ಮಾಡುತ್ತಿದೆ. ಸಂವಿಧಾನ ಸೌಧದ ಇಟ್ಟಿಗೆಗಳನ್ನು ಉರುಳಿಸುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಕಳವಳ ವ್ಯಕ್ತಪಡಿಸಿದರು.

ಕಲಾಮಂದಿರದಲ್ಲಿ ‘ಪ್ರಗತಿಪರ ಸಂಘಟನೆಗಳ ಒಕ್ಕೂಟ’ವು ‘ಪ.ಮಲ್ಲೇಶ್-90’ ಸ್ಮರಣೆ ಪ್ರಯುಕ್ತ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ADVERTISEMENT

‘ರೈತರನ್ನು ಶತ್ರುಗಳಂತೆ ನೋಡಲಾಗಿದೆ. ಅದಾನಿ ತಯಾರಿಸುವ ಡ್ರೋನ್‌ಗಳು ಇಸ್ರೇಲ್‌ ಮೂಲಕ ದೇಶದ ಹೋರಾಟನಿರತ ರೈತರ ವಿರುದ್ಧವಾಗಿಯೇ ಬಳಕೆಯಾಗಿವೆ. ಮೊಳೆಗಳು, ತಂತಿಬೇಲಿ, ಗೋಡೆಗಳನ್ನು ನಿರ್ಮಿಸಿ ರೈತ ಚಳವಳಿ ಹತ್ತಿಕ್ಕಲಾಗುತ್ತಿದೆ’ ಎಂದು ಉದಾಹರಿಸಿದರು.

‘2014ರ ನಂತರ ಭಾರತೀಯರು ನಿರಂಕುಶತ್ವ, ಸರ್ವಾಧಿಕಾರಿ ಆಡಳಿತದ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ. ಹೆಡಗೇವಾರ್‌, ಗೋಳ್ವಾಲರ್‌ ಅವರ ಸಿದ್ಧಾಂತದ ಆಧಾರ ಮೇಲೆಯೇ ದೇಶವನ್ನು ನಿರ್ಮಿಸಲಾಗುತ್ತಿದೆ. ಶಾಲೆಗಳಿಂತ ಪ್ರತಿಮೆಗಳು ಮುಖ್ಯವಾಗಿವೆ ಹೊರತು ವೈಚಾರಿಕತೆ, ವಿಜ್ಞಾನವು ಬೇಡವಾಗಿದೆ’ ಎಂದರು.

‘ಆರ್‌ಎಸ್‌ಎಸ್‌ಗೆ ಸಂವಿಧಾನವೇ ಸಮಸ್ಯೆಯಾಗಿದೆ. ಅದಕ್ಕೆ ಸಾಂವಿಧಾನಿಕ ಗಣರಾಜ್ಯ ಬೇಕಿಲ್ಲ. ಅದರ ಜಾಲತಾಣದಲ್ಲಿ ಮುಸ್ಲಿಮರು, ಕ್ರೈಸ್ತರು, ಸಮಾಜವಾದಿಗಳು ದೇಶದ ಆಂತರಿಕ ಶತ್ರುಗಳೆನ್ನುವ ಗೋಳ್ವಲ್ಕರ್ ಅವರ ‘ಬಂಚ್‌ ಆಫ್‌ ಥಾಟ್ಸ್‌’ ಸಿಗುತ್ತದೆ. ಜಾತಿ ಆಧಾರಿತ ಮನುಸ್ಮೃತಿಯನ್ನು ಜಾರಿಗೊಳಿಸುವುದಕ್ಕಾಗಿಯೇ ಅವರು ಅಧಿಕಾರಕ್ಕೆ ಬಂದಿದ್ದಾರೆ’ ಎಂದು ಹೇಳಿದರು.

‘ಡಬಲ್‌ ಎಂಜಿನ್‌ ಸರ್ಕಾರಗಳು ಸಂಸದೀಯ ಪ್ರಜಾಪ್ರಭುತ್ವದ ಆಧಾರದಲ್ಲಿಯೇ ಅಧಿಕಾರಕ್ಕೆ ಬಂದು ಸಂವಿಧಾನದ ಆಶಯಗಳಾದ ಮೂಲಭೂತ ಹಕ್ಕುಗಳು, ರಾಜ್ಯನಿರ್ದೇಶಕ ತತ್ವಗಳು ಸೇರಿದಂತೆ ಎಲ್ಲ ಸ್ತಂಭಗಳನ್ನು ಕೆಡವುತ್ತಿವೆ. ಈ ಸರ್ಕಾರಕ್ಕೆ ನೀಡಿರುವ ರಾಜಕೀಯ ಶಕ್ತಿಯನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ಮರಳಿ ಪಡೆಯಬೇಕು’ ಎಂದರು.

ಸಂಸತ್ತಿನಲ್ಲಿ ಚರ್ಚೆಯೇ ಇಲ್ಲ: ‘ಪುಣೆಯಲ್ಲಿ ಮೊಹಸಿನ್ ಶೇಖ್‌ ಹತ್ಯೆಯಿಂದ ಇಲ್ಲಿಯವರೆಗೂ ಹತ್ಯೆಗಳು ಮುಂದುವರಿದಿವೆ. ಮಣಿಪುರ ಸಂಘರ್ಷ ಸೃಷ್ಟಿಸಿ ಅಲ್ಲಿನ ಮೂರು ಸಮುದಾಯಗಳು ಮಾತನಾಡದಂತೆ ಮಾಡಲಾಗಿದೆ. 12 ಸಾವಿರ ಮಕ್ಕಳು ನಿರಾಶ್ರಿತ ಶಿಬಿರದಲ್ಲಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗುವುದೇ ಇಲ್ಲ’ ಎಂದು ತೀಸ್ತಾ ವಿಷಾದ ವ್ಯಕ್ತಪಡಿಸಿದರು.

‘ತುರ್ತು ಪರಿಸ್ಥಿತಿ ನಂತರ ಜನಚಳವಳಿಗಳು ನಡೆದು ಆಗಿನ ಸರ್ಕಾರಕ್ಕೆ ಪಾಠ ಕಲಿಸಿದ್ದವು. ಆದರೆ, ಇಂದು ಚಳವಳಿಗಳನ್ನೇ ಇಲ್ಲವಾಗಿಸಲಾಗುತ್ತಿದೆ. ಸಂಸತ್ತಿನ ಶೇ 84ರಷ್ಟು ಸದಸ್ಯರು ಕೋಟ್ಯಾಧಿಪತಿಗಳಾಗಿರುವಾಗ ಅವರು ರೈತರು, ಬಡವರು, ಚಳವಳಿಗಳ ಬಗ್ಗೆ ಮಾತನಾಡುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಮಾಧ್ಯಮಗಳು ಜನರ ನಡುವೆ ದ್ವೇಷ ಹರಡಲು ನಿರತವಾಗಿವೆ. ಅವರಿಗೆ ಪರಿಶಿಷ್ಟರು, ರೈತರು, ಮಹಿಳೆಯರು, ಬುಡಕಟ್ಟು ಜನರ ಸಂಕಷ್ಟಗಳು ಬೇಕಿಲ್ಲ’ ಎಂದರು.

ವಿಚಾರ ಸಂಕಿರಣದ ದಿಕ್ಸೂಚಿ ಭಾಷಣ ಮಾಡಿದ ಪ್ರೊ.ರವಿವರ್ಮ ಕುಮಾರ್, ‘ಭಾರತದ ಪ್ರಜಾತಂತ್ರದ ಆಧಾರವಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಅಸ್ಥಿರಗೊಳಿಸಲಾಗಿದೆ. ಕಳೆದ ಹತ್ತು ವರ್ಷದಲ್ಲಿ ಪ್ರಧಾನಿ ಸಂಸತ್ತಿನ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಮಣಿಪುರ ಸಂಘರ್ಷದ ಬಗ್ಗೆ ಒಂದು ಮಾತೂ ಆಡಿಲ್ಲ’ ಎಂದರು.

‘ಸರ್ಕಾರವನ್ನು ಪ್ರಶ್ನಿಸುವ ವಿರೋಧ ಪಕ್ಷಗಳ ಸದಸ್ಯರನ್ನು ಅನರ್ಹಗೊಳಿಸಲಾಗುತ್ತಿದೆ. ಜಾರಿ ನಿರ್ದೇಶನಾಲಯದ ಮೂಲಕ ಮಾನವ ಹಕ್ಕು ಸಂಘಟನೆಗಳ ಕತ್ತು ಹಿಸುಕಲಾಗಿದೆ. ಸಂಸತ್‌, ರಾಮಮಂದಿರ ಉದ್ಘಾಟನೆಗೆ ಕಾರ್ಯಾಂಗದ ಮುಖ್ಯಸ್ಥೆಯಾದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಆಹ್ವಾನಿಸದೇ ಅವಮಾನಿಸಲಾಗಿದೆ’ ಎಂದರು.

‘ಲೋಕಸೇವಾ ಆಯೋಗವನ್ನು ಕಡೆಗಣಿಸಿ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಖಾಸಗಿ ವಲಯದ ವ್ಯಕ್ತಿಗಳನ್ನು ನೇಮಕ ಮಾಡಲಾಗುತ್ತಿದೆ. ಸರ್ಕಾರ ಹಾಗೂ ಪಕ್ಷದ ಪರ ತೀರ್ಪು ನೀಡುವ ನ್ಯಾಯಾಧೀಶರು ನಿವೃತ್ತಿಯ ನಂತರ ರಾಜ್ಯಪಾಲರಾಗುವ, ಅರ್ಜಿ ಹಾಕಿದವರಿಗೆ ಜ್ಞಾನಪೀಠ ನೀಡುವ ಕಾಲಘಟ್ಟ ಇದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ರಂಗಕರ್ಮಿ ಸಿ.ಬಸವಲಿಂಗಯ್ಯ, ಸವಿತಾ ಮಲ್ಲೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.