ADVERTISEMENT

ವಿಧಾನ ಪರಿಷತ್ | ಧಾರವಾಡ, ಮೈಸೂರಲ್ಲಿ ಸೆಂಟರ್‌ ಫಾರ್‌ ಎಕ್ಸಲೆನ್ಸ್‌: ಲಾಡ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 16:22 IST
Last Updated 13 ಆಗಸ್ಟ್ 2025, 16:22 IST
ಸಂತೋಷ್ ಲಾಡ್‌
ಸಂತೋಷ್ ಲಾಡ್‌   

ಬೆಂಗಳೂರು: ಕಾರ್ಮಿಕರ ಕೌಶಲ ಅಭಿವೃದ್ಧಿಗಾಗಿ ಧಾರವಾಡ ಹಾಗೂ ಮೈಸೂರಿನ ಭಾಗದಲ್ಲಿ ‘ಸೆಂಟರ್‌ ಫಾರ್‌ ಎಕ್ಸಲೆನ್ಸ್‌’ ಆರಂಭಿಸಿ, ಸುಮಾರು ಏಳು ಸಾವಿರ ಜನರಿಗೆ ತರಬೇತಿ ನೀಡಲಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎನ್‌. ರವಿಕುಮಾರ್‌, ಕೆ.ಎಸ್‌. ನವೀನ್‌, ಡಿ.ಎಸ್‌. ಅರುಣ್‌ ಅವರು ನಿಯಮ 330ರಡಿ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ₹750 ಕೋಟಿ ವೆಚ್ಚದಲ್ಲಿ 31 ಜಿಲ್ಲೆಗಳಲ್ಲಿ ಶ್ರಮಿಕ ವಸತಿ ಶಾಲೆಗಳನ್ನು ಆರಂಭಿಸುವ ಬದಲು ಕಾರ್ಮಿಕರಿಗೆ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಿ ಎಂದು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಲಾಡ್, ‘ಆಟೊಮೊಬೈಲ್‌, ಕಟ್ಟಡ ನಿರ್ಮಾಣ, ಎಲೆಕ್ಟ್ರಿಕಲ್‌ ಸೇರಿದಂತೆ 28 ರೀತಿಯ ತರಬೇತಿಗಳನ್ನು ಕೈಗಾರಿಕೆ ಅಗತ್ಯವಾಗಿರುವ ಕೌಶಲಗಳನ್ನು ಆ ಕ್ಷೇತ್ರದ ತಜ್ಞರೇ  ‘ಸೆಂಟರ್‌ ಫಾರ್‌ ಎಕ್ಸಲೆನ್ಸ್‌’ನಲ್ಲಿ ನೀಡುತ್ತಾರೆ. ನೋಡಲ್‌ ಏಜೆನ್ಸಿಯನ್ನು ಸ್ಥಾಪಿಸಿ ಅತ್ಯುತ್ತಮ ಕೌಶಲ ಒದಗಿಸಲಾಗುತ್ತದೆ’ ಎಂದರು.

ADVERTISEMENT

‘ಕಾರ್ಮಿಕರ ಮಕ್ಕಳಿಗೆ ಪ್ರತ್ಯೇಕವಾಗಿ ಶ್ರಮಿಕ ವಸತಿ ಶಾಲೆ ನಿರ್ಮಿಸುವುದರಿಂದ ಅವರನ್ನು ಪ್ರತ್ಯೇಕಗೊಳಿಸಿದರೆ ಅವರಿಗೆ ಕೀಳರಿಮೆ ಬರುವಂತಾಗುತ್ತದೆ’ ಎಂದು ಬಿಜೆಪಿಯ ಸಿ.ಟಿ. ರವಿ ಹೇಳಿದರು.

‘ಕೇಂದ್ರ ಸರ್ಕಾರದ ಕಾಯ್ದೆಯಂತೆ ಕಾರ್ಮಿಕರ ಕಲ್ಯಾಣಕ್ಕೆ ಮಾತ್ರ ಈ ನಿಧಿಯನ್ನು ಬಳಸಬೇಕು. ಬೇರೆ ಇಲಾಖೆಗಳಿಗೆ ವರ್ಗಾಯಿಸುವಂತಿಲ್ಲ. ಅದಕ್ಕಾಗಿ ವಸತಿ ಶಾಲೆ ನಿರ್ಮಿಸಲಾಗುತ್ತಿದೆ’ ಎಂದು ಸಂತೋಷ್ ಲಾಡ್‌ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.