ADVERTISEMENT

ಮಾಹಿತಿ ಕಳವಿನಲ್ಲಿ ಕೇಂದ್ರವೂ ಶಾಮೀಲು: ಸುರ್ಜೇವಾಲಾ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 17:48 IST
Last Updated 25 ನವೆಂಬರ್ 2022, 17:48 IST
ರಣದೀಪ್‌ ಸಿಂಗ್‌ ಸುರ್ಜೇವಾಲ
ರಣದೀಪ್‌ ಸಿಂಗ್‌ ಸುರ್ಜೇವಾಲ   

ಬೆಂಗಳೂರು: ‘ಮತದಾರರ ಮಾಹಿತಿ ಕಳವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇರವಾಗಿ ಭಾಗಿಯಾಗಿದೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಶುಕ್ರವಾರ ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ಮತ್ತು ಅವರ ಆಪ್ತರ ಬ್ಯಾಂಕ್‌ ಖಾತೆಗಳಿಗೆ ಕೇಂದ್ರ ಸರ್ಕಾರದ ಸಿಟಿಜನ್‌ ಸರ್ವಿಸ್‌ ಸೆಂಟರ್‌ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಈ ಹಗರಣ ಬೃಹದಾಕಾರವಾಗಿದ್ದು, ಮತದಾರರ ಮಾಹಿತಿ ಕಳವಿನ ಜತೆಗೆತೆರಿಗೆ ಹಣವನ್ನೂ ಲೂಟಿ ಹೊಡೆದಿದ್ದಾರೆ’ ಎಂದರು.

ರವಿಕುಮಾರ್‌ ಅವರ ಗ್ರಾಮದ ಹಲವು ವ್ಯಕ್ತಿಗಳ ಬ್ಯಾಂಕ್‌ ಖಾತೆಗಳಿಗೂ ಕೇಂದ್ರ ಸರ್ಕಾರದ ಸಂಸ್ಥೆಯಿಂದ ಹಣ ವರ್ಗಾವಣೆ ಆಗಿದೆ. ಈ ಕುರಿತು ತನಿಖೆ ನಡೆಯಬೇಕು. ಸತ್ಯಾಂಶ ಬಯಲಿಗೆಳೆಯಲು ಹೈಕೋರ್ಟ್‌
ಮುಖ್ಯ ನ್ಯಾಯಮೂರ್ತಿಯವರ ಮೇಲುಸ್ತುವಾರಿಯಲ್ಲೇ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

‘ಬಸವರಾಜ ಬೊಮ್ಮಾಯಿ ಅವರೇ ಮತದಾರರ ಮಾಹಿತಿ ಕಳವು ಹಗರಣದ ‘ಕಿಂಗ್‌ ಪಿನ್‌’. ಈ ವಿಷಯದಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ’ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ‘ಮತದಾರರ ಮಾಹಿತಿ ಕಳವು ಹಾಗೂ ದುರ್ಬಳಕೆ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರದ ಸಂಸ್ಥೆ ಯೊಂದರಿಂದ ಪ್ರಕರಣದ ಕಿಂಗ್‌ ಪಿನ್‌ಗಳಿಗೆ ಸಾಕಷ್ಟು ಹಣ ಹೋಗಿದೆ. ಅದು ಬೇರೆಯವರ ಹೆಸರಿಗೆ ವರ್ಗಾವಣೆಯಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ಹಣವನ್ನು ಯಾರು? ಯಾವ ಕಾರಣಕ್ಕೆ? ಯಾರಿಗೆ? ವರ್ಗಾವಣೆ ಮಾಡಿದ್ದಾರೆ ಎಂಬುದು ಬಯಲಾಗಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.