ADVERTISEMENT

ಸಿಇಟಿ ಗೊಂದಲದಿಂದ ಶೈಕ್ಷಣಿಕ ಅವಧಿ ನಷ್ಟ: ಎಂ.ಆರ್. ದೊರೆಸ್ವಾಮಿ ಕಳವಳ

ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಕಳವಳ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 19:12 IST
Last Updated 8 ಸೆಪ್ಟೆಂಬರ್ 2022, 19:12 IST
ಪ್ರೊ.ಎಂ.ಆರ್. ದೊರೆಸ್ವಾಮಿ
ಪ್ರೊ.ಎಂ.ಆರ್. ದೊರೆಸ್ವಾಮಿ   

ಬೆಂಗಳೂರು: ‘ರಾಜ್ಯ ಸರ್ಕಾರ ಆದಷ್ಟು ಶೀಘ್ರ ಸಿಇಟಿ ರ್‍ಯಾಂಕ್ ಗೊಂದಲವನ್ನು ಬಗೆಹರಿಸಿ,ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಅವಧಿ ನಷ್ಟವಾಗುವ ಸಾಧ್ಯತೆಯಿದೆ’ ಎಂದುರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಪಿಇಎಸ್ ವಿಶ್ವವಿದ್ಯಾಲಯವು 2022-23ನೇ ಸಾಲಿನ ತರಗತಿಗಳನ್ನು ಶ್ರೀಘ್ರದಲ್ಲೇ ಆರಂಭಿಸಲಿದೆ. ಸಿಇಟಿ ವಿದ್ಯಾರ್ಥಿಗಳು ಬರುವವರೆಗೂ ಹಾಲಿ ಪ್ರವೇಶ ಪಡೆದಿರುವ ಶೇ 60ರಷ್ಟು ವಿದ್ಯಾರ್ಥಿಗಳಿಗೆ ಬೋಧನೆ ಮಾಡದೇ ಇರಲು ಸಾಧ್ಯವಿಲ್ಲ. ಸಿಇಟಿ ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ, ಶೈಕ್ಷಣಿಕ ಅವಧಿಯ ನಷ್ಟವನ್ನು ಸರಿದೂಗಿಸುತ್ತೇವೆ. ಆದರೂ ಸರ್ಕಾರ ಸಿಇಟಿ ಗೊಂದಲವನ್ನು ಬೇಗ ಬಗೆಹರಿಸದೇ ಇರುವುದು ನ್ಯಾಯ ಸಮ್ಮತವಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ’ ಎಂದರು.

‘ಪ್ರತಿ ವರ್ಷ ಒಂದಲ್ಲ ಒಂದು ವಿಷಯದಿಂದ ಸಿಇಟಿ ಪ್ರವೇಶ ಪ್ರಕ್ರಿಯೆ ವಿಳಂಬವಾಗುತ್ತಲೇ ಇದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ.ಸಿಇಟಿಯನ್ನೇ ಇಷ್ಟೊಂದು ವಿಳಂಬ ಮಾಡುತ್ತಿರುವ ಸರ್ಕಾರ, ಪಿಜಿಸಿಇಟಿ ಯಾವಾಗ ನಡೆಸಲಿದೆ’ ಎಂದು ಪ್ರಶ್ನಿಸಿದರು.

ADVERTISEMENT

‘ಎಂಬಿಎ, ಎಂಸಿಎ ಸೇರಿ ಹಲವು ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಪಿಜಿಸಿಇಟಿಯನ್ನು ಯಾವಾಗ ನಡೆಸಲಿದೆ ಎಂಬ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈವರೆಗೆ ಮಾಹಿತಿ ನೀಡಿಲ್ಲ. ಆದಷ್ಟು ಬೇಗ ಸಿಇಟಿ ಪ್ರಕ್ರಿಯೆ ಮುಗಿಸಿ, ಪಿಜಿಸಿಇಟಿ ನಡೆಸಬೇಕು’ ಎಂದು ಆಗ್ರಹಿಸಿದರು.

ಸಿಇಟಿರ್‍ಯಾಂಕಿಂಗ್‌: ಪರಿಷ್ಕೃತ ಪಟ್ಟಿಗೆ ಆಗ್ರಹ

ಬೆಂಗಳೂರು: ಕೋರ್ಟ್‌ ತೀರ್ಪಿನ ಪ್ರಕಾರ ಪಿಯು ಅಂಕಗಳನ್ನು ಪರಿಗಣಿಸಿ,ಸಿಇಟಿಪರಿಷ್ಕೃತ ರ್‍ಯಾಂಕ್‌ ಪಟ್ಟಿ ಪ್ರಕಟಿಸಬೇಕು ಎಂದು ಪುನರಾವರ್ತಿತ ಅಭ್ಯರ್ಥಿಗಳು ಹಾಗೂ ಅವರ ಪೋಷಕರು ಆಗ್ರಹಿಸಿದರು.

ಹೊಸದಾಗಿಸಿಇಟಿರ್‍ಯಾಂಕಿಂಗ್‌ ಪಟ್ಟಿ ಪ್ರಕಟಿಸಿದರೆ ಭಾರಿ ವ್ಯತ್ಯಾಸ ಆಗುವುದಿಲ್ಲ. ಅಲ್ಲದೇ, 24 ಸಾವಿರ ವಿದ್ಯಾರ್ಥಿಗಳಲ್ಲಿ ಬಹುತೇಕರು ನೀಟ್‌ ಸೇರಿದಂತೆ ಇತರೆ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಶ್ವಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಾಲವೀರ ರೆಡ್ಡಿ, ವಕೀಲರಾದ ರಾಜೇಂದ್ರ, ಶಿವಕುಮಾರ್, ರತ್ನಾ ಗೌಡ, ಪೋಷಕ ಗಿರೀಶ್‌ ಡಿ. ಕುಲಕರ್ಣಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

2020–21ನೇ ಸಾಲಿನಲ್ಲಿ ಕೋವಿಡ್‌ ಕಾರಣದಿಂದ ದ್ವಿತೀಯ ಪಿಯು ಫಲಿತಾಂಶವನ್ನು ಪರೀಕ್ಷೆ ಇಲ್ಲದೇ ಪ್ರಕಟಿಸಲಾಗಿತ್ತು. ಅಂದು ಶೈಕ್ಷಣಿಕ ಬೋಧನೆ, ಪೂರ್ವ ತಯಾರಿ ಇಲ್ಲದೇಸಿಇಟಿಬರೆದಿದ್ದಾರೆ. ಹಾಗಾಗಿ, ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿರಲಿಲ್ಲ. ತರಬೇತಿ ಪಡೆದು ಈ ವರ್ಷ ಮತ್ತೆಸಿಇಟಿಬರೆದಿದ್ದಾರೆ. ಪರೀಕ್ಷೆಗೆ ಮುಂಚಿತವಾಗಿ ಕೆಇಎ ಪಿಯು ಅಂಕಗಳನ್ನು ಪರಿಗಣಿಸದಿರುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿರಲಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕೋರ್ಟ್‌ ನ್ಯಾಯ ದೊರಕಿಸಿದೆ. ಆದರೆ, ಸರ್ಕಾರ ಆದೇಶ ಪಾಲಿಸಲು ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.