ADVERTISEMENT

ಅಂತಿಮವಾಗದ ಸೀಟುಗಳ ಪಟ್ಟಿ: ಸಿಇಟಿ ಕೌನ್ಸೆಲಿಂಗ್‌ ಮತ್ತಷ್ಟು ವಿಳಂಬ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:54 IST
Last Updated 21 ಜೂನ್ 2025, 15:54 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ–2025) ಫಲಿತಾಂಶ ಪ್ರಕಟವಾಗಿ ಒಂದು ತಿಂಗಳಾದರೂ ವಿವಿಧ ಕೋರ್ಸ್‌ಗಳಲ್ಲಿ ಲಭ್ಯವಿರುವ ಸೀಟುಗಳ ಪಟ್ಟಿ ಅಂತಿಮಗೊಂಡಿಲ್ಲ. ಹಾಗಾಗಿ, ಕೌನ್ಸೆಲಿಂಗ್‌ ಪ್ರಕ್ರಿಯೆ ಇನ್ನೂ ಒಂದು ವಾರ ವಿಳಂಬವಾಗಲಿದೆ.

2025–26ನೇ ಸಾಲಿನಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಬಯಸಿ 3.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೇ 24ರಂದು ಫಲಿತಾಂಶ ಪ್ರಕಟಿಸಿತ್ತು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್‌)–2025ರ ಫಲಿತಾಂಶವೂ ಇದೇ ಜೂನ್‌ 14ರಂದು ಪ್ರಕಟವಾಗಿದೆ. 

ADVERTISEMENT

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಟ್‌ ಅಂಕಗಳ ಆಧಾರದಲ್ಲಿ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡುತ್ತದೆ. ಮೊದಲ ಸುತ್ತು ಮುಗಿಯುತ್ತಿದ್ದಂತೆ ಎಂಜಿನಿಯರಿಂಗ್‌ ಸೇರಿದಂತೆ ಇತರೆ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭಿಸುತ್ತದೆ. ಆದರೆ, ರಾಷ್ಟ್ರೀಯ ವೈದ್ಯಕೀಯ ಆಯೋಗ ಪ್ರವೇಶಕ್ಕೆ ಲಭ್ಯವಿರುವ ವೈದ್ಯಕೀಯ ಸೀಟುಗಳ ಪಟ್ಟಿ ಅಂತಿಮಗೊಳಿಸದ ಕಾರಣ ರಾಜ್ಯದಲ್ಲೂ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ.  

ಸಿಇಟಿ ಮೂಲಕ ಹಂಚಿಕೆ ಆಗುವ ಸೀಟುಗಳಲ್ಲಿ ಪಶುವೈದ್ಯಕೀಯ, ಫಾರ್ಮಾ ಸೀಟು ಹೊರತುಪಡಿಸಿದರೆ ಇತರೆ ಕೋರ್ಸ್‌ಗಳಲ್ಲಿ ಲಭ್ಯವಿರುವ ಸೀಟುಗಳ ಪಟ್ಟಿಯೂ ಅಂತಿಮಗೊಂಡಿಲ್ಲ. ಎಂಜಿನಿಯರಿಂಗ್‌ನಲ್ಲಿ ಲಭ್ಯವಿರುವ 1.35 ಲಕ್ಷ ಸೀಟುಗಳ ಕರಡು ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ. ಆದರೆ, ಯೋಗ ಮತ್ತು ನ್ಯಾಚುರೋಪಥಿ, ಬಿ.ಎಸ್‌ಸಿ ಕೃಷಿ, ಬಿ.ಎಸ್‌ಸಿ ನರ್ಸಿಂಗ್‌ ಕೋರ್ಸ್‌ಗಳ ಸೀಟುಗಳ ಪಟ್ಟಿಯೂ ಪ್ರಕಟವಾಗಿಲ್ಲ.

‘ವೈದ್ಯಕೀಯ ಸೀಟುಗಳ ಪಟ್ಟಿಗಾಗಿ ಕಾಯುತ್ತಿದ್ದೇವೆ. ಪಟ್ಟಿ ಪ್ರಕಟವಾದ ತಕ್ಷಣ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ. ನಂತರ ಒಂದೆರಡು ದಿನಗಳಲ್ಲೇ ಸಿಇಟಿ ಕೌನ್ಸೆಲಿಂಗ್ ಆರಂಭಿಸಲಾಗುವುದು. ಇದಕ್ಕೆಲ್ಲ ಒಂದು ವಾರಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.