ADVERTISEMENT

ಸಿಇಟಿ ಫಲಿತಾಂಶ; ಸಾಧಕರು ಏನಂತಾರೆ?

​ಪ್ರಜಾವಾಣಿ ವಾರ್ತೆ
Published 24 ಮೇ 2025, 22:58 IST
Last Updated 24 ಮೇ 2025, 22:58 IST
   

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ–2025) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಪ್ರಕಟಿಸಿದ್ದು, ಎಲ್ಲ ಏಳು ವಿಭಾಗಗಳಲ್ಲೂ ಮೊದಲ 10 ರ‍್ಯಾಂಕ್‌ ಪಡೆದವರಲ್ಲಿ ಬಾಲಕರೇ ಪಾರುಪತ್ಯ ಮೆರೆದಿದ್ದಾರೆ.

ಕಾಲೇಜಿನಲ್ಲಿ ಉಪನ್ಯಾಸಕರ ಪಾಠ ಅತ್ಯುತ್ತಮವಾಗಿತ್ತು. ಪರೀಕ್ಷೆಗೆ ಎರಡು ವಾರ ಇರುವಾಗ ಬಹುತೇಕ ಪ್ರತಿದಿನ ಅಣಕು ಪರೀಕ್ಷೆಗಳು ಇರುತ್ತಿದ್ದವು. ಜೊತೆಗೆ, ನಾನೂ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆ. ಹೀಗಾಗಿ, ಉತ್ತಮ ರ್‍ಯಾಂಕ್ ಪಡೆಯಲು ಸಾಧ್ಯವಾಯಿತು. ನೀಟ್ ನನ್ನ ಮೊದಲ ಆದ್ಯತೆಯಾಗಿದ್ದು, ಅದರ ಫಲಿತಾಂಶಕ್ಕೆ ಕಾಯುತ್ತಿದ್ದೇನೆ.
– ಸಾಯಿಶ್ ಪಂಡಿತ್‌
ಮೊಬೈಲ್ ಫೋನ್ ಮಕ್ಕಳ ಮನಸ್ಸನ್ನು ಚಂಚಲಗೊಳಿಸುತ್ತದೆ. ಕಾಲೇಜಿನಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವಂತಿರಲಿಲ್ಲ. ಹೀಗಾಗಿ, ಓದಿನಲ್ಲಿ ಹೆಚ್ಚು ಲಕ್ಷ್ಯ ಕೇಂದ್ರೀಕರಿಸಿ ಸಾಧನೆ ಮಾಡಲು ಸಾಧ್ಯವಾಯಿತು. ನೀಟ್ ಪರೀಕ್ಷೆಗೆ ಸಾಕಷ್ಟು ಸಿದ್ಧತೆ ಮಾಡಿದ್ದು, ಕೆಸಿಇಟಿಗೂ ಅನುಕೂಲಕ್ಕೆ ಬಂತು. ಒಳ್ಳೆಯ ಅಂಕ ಬರುವ ನಿರೀಕ್ಷೆ ಇತ್ತು.
– ಸಫಲ್‌ ಎಸ್‌ ಶೆಟ್ಟಿ
ನೀಟ್ ಪರೀಕ್ಷೆ ನನ್ನ ಮೊದಲ ಆದ್ಯತೆಯಾಗಿದ್ದು, ವೈದ್ಯನಾಗುವ ಆಸೆಯಿದೆ. ಕಾಲೇಜಿನಲ್ಲಿ ನೀಟ್ ಮತ್ತು ಸಿಇಟಿ ಎರಡೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಕಷ್ಟು ಸಿದ್ಧತೆ ಮಾಡಿಸಿದ್ದರು. ಓದುವಾಗಲೂ ನೀಟ್‌ ಒಳ್ಳೆಯ ಅಂಕ ಬರುವ ನಿರೀಕ್ಷೆ ಇದ್ದರೂ, ರ್‍ಯಾಂಕ್ ನಿರೀಕ್ಷಿಸಿರಲಿಲ್ಲ.
– ಸುಚಿತ್ ಪ್ರಸಾದ್
ಕಾಲೇಜಿನಲ್ಲಿ ಪ್ರತಿವಾರ ನಡೆಸುತ್ತಿದ್ದ ಪರೀಕ್ಷೆ, ಕೊನೆಯಲ್ಲಿ ನಡೆದ ಅಣಕು ಪರೀಕ್ಷೆ ರ್‍ಯಾಂಕ್‌ ಬರಲು ನೆರವಾಯಿತು. ಕಾಲೇಜು ಅವಧಿ ನಂತರವು ನಿತ್ಯ 4–5 ತಾಸು ಅಭ್ಯಾಸ ಮಾಡುತ್ತಿದ್ದೆ.
– ಅಕ್ಷಯ್ ಹೆಗಡೆ‌
ಪಶು ವೈದ್ಯಕೀಯ ಸೀಟು ಲಭಿಸುವ ವಿಶ್ವಾಸವಿದೆ. ಕಾಲೇಜಿನ ಪ್ರಾಚಾರ್ಯ, ಉಪನ್ಯಾಸಕರ ಪ್ರೋತ್ಸಾಹ, ತಂದೆ- ತಾಯಿ ಪ್ರೇರಣೆಯಿಂದ ರ್‍ಯಾಂಕ್‌ ಪಡೆಯಲು ಸಾಧ್ಯವಾಗಿದೆ.
– ಭುವನೇಶ್ವರಿ ಮಲ್ಲಿಕಾರ್ಜುನ
‘ರ‍್ಯಾಂಕ್‌ ಬರುತ್ತದೆ ಎಂದು ಕನಸೂ ಕಂಡಿರಲಿಲ್ಲ. ನನ್ನ ಅಧ್ಯಯನಕ್ಕೆ ತಕ್ಕ ಸ್ಥಾನ ಸಿಕ್ಕೆ ಸಿಗುತ್ತದೆ ಎನ್ನುವ ಭರವಸೆ ಇತ್ತು. ರ‍್ಯಾಂಕ್‌ ಬಂದಿರುವುದರಿಂದ ತುಂಬ ಸಂತೋಷ ಆಗಿದೆ. ಇದರ ಶ್ರೇಯ ನಮ್ಮ ಕಾಲೇಜಿಗೆ ಸಲ್ಲಬೇಕು.
– ಅಶ್ವಿನಿ ಎಕ್ಕುಂಡಿ
ಜೆಇಇ, ನೀಟ್‌ ಪರೀಕ್ಷೆಗಳಿಗೆ ಓದುತ್ತಿದ್ದೆ. ಜೊತೆಗೆ ತರಗತಿ ಮುಗಿದು ಒಂದು ತಿಂಗಳ ಅವಧಿ ಸಿಕ್ಕಿದ್ದರಿಂದ ಸಿಇಟಿಗೂ ತಯಾರಿ ನಡೆಸಿದ್ದೆ. ಕಾಲೇಜಿನಲ್ಲಿ ದಿನ ಬಿಟ್ಟು ದಿನ ಅಣಕು ಪರೀಕ್ಷೆಗಳನ್ನು ನಡೆಸಿದ್ದರು. ಇದೆಲ್ಲ ಸಮಯ ನಿರ್ವಹಣೆಯೊಂದಿಗೆ ಪರೀಕ್ಷೆ ಬರೆಯಲು ಅನುಕೂಲವಾಯಿತು. ಮುಂದೇನು ಮಾಡಬೇಕು ಎಂದು ಸದ್ಯ ನಿರ್ಧರಿಸಿಲ್ಲ. ಜೆಇಇ, ನೀಟ್‌ ಫಲಿತಾಂಶ ನೋಡಿಕೊಂಡು ನಿರ್ಧರಿಸುತ್ತೇನೆ.
– ಸಾತ್ವಿಕ್‌ ಬಿ. ಬಿರಾದಾರ್‌
ಕಾಲೇಜು ಮತ್ತು ಮನೆಯಲ್ಲಿ ಪ್ರೋತ್ಸಾಹ ನೀಡಿದ್ದರಿಂದ ಉತ್ತಮ ರ‍್ಯಾಂಕ್‌ ಪಡೆಯಲು ಸಾಧ್ಯವಾಗಿದೆ. ಜೆಇಇಗೆ ತಯಾರಾಗುತ್ತಿದ್ದೇನೆ. ಕಂಪ್ಯೂಟರ್‌ ಸೈನ್ಸ್‌ ಮಾಡಿ, ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉಪಯೋಗವಾಗುವ ಎಂಬಿಎ ಮಾಡುವ ಗುರಿ ಇದೆ.
– ದಿನೇಶ್‌ ಗೋಮತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.