ADVERTISEMENT

ರಾಜೀವ್‌ಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ ಗೂಂಡಾ ಕಾಯ್ದೆ ಅಡಿ ಬಂಧಿಸಿ: ಛಲವಾದಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 15:28 IST
Last Updated 15 ಜನವರಿ 2026, 15:28 IST
<div class="paragraphs"><p>ಛಲವಾದಿ ನಾರಾಯಣಸ್ವಾಮಿ</p></div>

ಛಲವಾದಿ ನಾರಾಯಣಸ್ವಾಮಿ

   

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ರಕ್ಷಣೆಯೇ ಇಲ್ಲವಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯದೇ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ದೌರ್ಜನ್ಯ ನಡೆಸುವ ಮತ್ತು ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿರುವ ಕಾಂಗ್ರೆಸ್‌ ನಾಯಕ ರಾಜೀವ್‌ಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ADVERTISEMENT

‘ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ದೌರ್ಜನ್ಯ ನಡೆದಾಗ ಮಧ್ಯ ಪ್ರವೇಶಿಸಲು ನಿಮಗೆ ನಿಮ್ಮದೇ ಆದ ಅಧಿಕಾರ ಇದೆ. ಸರ್ಕಾರ ತಪ್ಪು ಮಾಡಿದಾಗ ಅದನ್ನು ತಿದ್ದಿ ಬುದ್ಧಿ ಹೇಳುವ ಕೆಲಸವನ್ನೂ ಮಾಡಬೇಕು. ನಿಮ್ಮ ಕರ್ತವ್ಯ ನೀವು ಮಾಡದೇ ಇದ್ದರೆ ನಿಮ್ಮ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಎಚ್ಚರಿಕೆ ನೀಡಿದ್ದಾರೆ.

‘ಕಾಂಗ್ರೆಸ್ ಶಾಸಕರು,ಮುಖಂಡರು, ಕಾರ್ಯಕರ್ತರು ಅಧಿಕಾರಿಗಳಿಗೆ ಬಹಿರಂಗವಾಗಿ ಪ್ರಾಣ ಬೆದರಿಕೆ ಹಾಕುವುದು ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಕರಣಗಳು ರಾಜ್ಯದ ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ನೀವು ಕೈಕಟ್ಟಿ ಕೂರುವುದು ಸರಿಯಲ್ಲ’ ಎಂದು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಹಶೀಲ್ದಾರ್ ಅವರಿಗೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದು ಆ ಕ್ಷೇತ್ರದ ಶಾಸಕ ಕೀಳುಮಟ್ಟದಲ್ಲಿ ನಿಂದಿಸಿದ್ದರು. ಶಾಸಕರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವ ಹಕ್ಕು ಇದೆ. ಆದರೆ ಬಳಸುವ ಭಾಷೆ ಮತ್ತು ನಡೆದುಕೊಳ್ಳುವ ರೀತಿ ಸಂವಿಧಾನಬದ್ಧವಾಗಿರಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.