ಮಂಡ್ಯ: ‘ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರಿಗೆ ದೊಡ್ಡ ಮುಖಭಂಗ ಆಗಿದೆ. ಸೌಜನ್ಯ ಸತ್ತಾಗ ಆರ್. ಅಶೋಕ್ ಗೃಹ ಸಚಿವರಾಗಿದ್ದರು. ಅಂದೇ ಸೂಕ್ತ ತನಿಖೆ ಮಾಡಬಹುದಿತ್ತು. ಧರ್ಮಸ್ಥಳದ ಬಗ್ಗೆ ಮಾತನಾಡಲು ಬಿಟ್ಟಿದ್ದು ಮಹಾ ಅಪರಾಧ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಧರ್ಮಸ್ಥಳದ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ವಿಜಯೇಂದ್ರ, ಆರ್.ಅಶೋಕ್ ಈಗ ಮಾತನಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಸೌಜನ್ಯ ಹೋರಾಟ ನಡೆಯುವಾಗ ಇವರೆಲ್ಲ ಎಲ್ಲಿ ಹೋಗಿದ್ದರು. ಇವರದೇ ಸರ್ಕಾರವಿತ್ತಲ್ಲಾ’ ಎಂದು ಪ್ರತಿಕ್ರಿಯಿಸಿದರು.
ಎಸ್‌ಐಟಿ ರಚನೆ ಮಾಡಿದಾಗ ಬಾಯಿಮುಚ್ಚಿಕೊಂಡು ಸುಮ್ಮನಿದ್ದು ಈಗ ಲಾಭ ಪಡೆಯೋಕೆ ನೋಡ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಕ್ರಮ ಆಗಬೇಕು ಎಂದಾಗ ಬಿಜೆಪಿಯವರಿಗೆ ಜ್ಞಾನೋದಯವಾಗಿದೆ. ಎಸ್‌ಐಟಿ ಮೂಲಕ ನಮ್ಮ ಸರ್ಕಾರ ಸತ್ಯವನ್ನು ಹೊರಗೆ ತಂದಿದೆ. ಇನ್ನು ಮುಂದೆಯಾದರೂ ಬಿಜೆಪಿಯವರು ಧರ್ಮಧ ವಿಚಾರದಲ್ಲಿ ರಾಜಕಾರಣ ಮಾಡೋದನ್ನು ಬಿಡಲಿ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಡಿ.ಕೆ.ಶಿವಕುಮಾರ್ ಬಿಜೆಪಿಗೆ ಹೋಗುವುದಾಗಿದ್ದರೆ ಎಂದೋ ಹೋಗಿರುತ್ತಿದ್ದರು. ಕಾಂಗ್ರೆಸ್‌ನಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ. ಉತ್ತಮ ಕೆಪಿಸಿಸಿ ಅಧ್ಯಕ್ಷರು ಅಂತ ಹೆಸರು ಪಡೆದಿದ್ದಾರೆ. ಅವರೇಕೆ ಈಗ ಬಿಜೆಪಿಗೆ ಹೋಗುತ್ತಾರೆ. ಸಂದರ್ಭ ಬಂದಾಗ ಅವರೂ ಸಿಎಂ ಆಗುತ್ತಾರೆ. ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.