ADVERTISEMENT

ಚಾಮುಂಡಿಬೆಟ್ಟಕ್ಕೆ ವಿಶೇಷ ಠಾಣೆ ಬೇಕೆಂಬ ಕೂಗು ಮುನ್ನೆಲೆಗೆ

ತಪ್ಪಲಿನಲ್ಲಿ ಪೊಲೀಸರ ಗಸ್ತು ಇಲ್ಲ, ಜನರಿಗಿಲ್ಲ ರಕ್ಷಣೆ

ಕೆ.ಎಸ್.ಗಿರೀಶ್
Published 30 ಆಗಸ್ಟ್ 2021, 4:12 IST
Last Updated 30 ಆಗಸ್ಟ್ 2021, 4:12 IST
ಮೈಸೂರಿನ ಚಾಮುಂಡಿಬೆಟ್ಟದ ಮೆಟ್ಟಿಲು
ಮೈಸೂರಿನ ಚಾಮುಂಡಿಬೆಟ್ಟದ ಮೆಟ್ಟಿಲು   

ಮೈಸೂರು: ದೇಶ–ವಿದೇಶಿಗರ ಪ್ರವಾಸಿಗರಷ್ಟೇ ಅಲ್ಲದೆ ಅಸಂಖ್ಯಾತ ಭಕ್ತರ ಆರಾಧನೆಯ ಕೇಂದ್ರವಾದ ಚಾಮುಂಡಿ ಬೆಟ್ಟ ಹಾಗೂ ತಪ್ಪಲಿಗೆ ರಕ್ಷಣೆ ಕೊಡುವುದು ಯಾರ ಹೊಣೆ ಎಂಬ ಪ್ರಶ್ನೆ ಈಗ ಎದುರಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಬೆಟ್ಟಕ್ಕೆ ಬರುವವರ ರಕ್ಷಣೆಗೆಂದೇ ವಿಶೇಷ ಠಾಣೆಯನ್ನು ಸ್ಥಾಪಿಸಬೇಕು ಎಂಬ ಕೂಗೂ ಎದ್ದಿದೆ.

ಬೆಟ್ಟದ ರಕ್ಷಣಾ ವ್ಯಾಪ್ತಿಯು ಮೂರು ಠಾಣೆಗಳಲ್ಲಿ ಹಂಚಿ ಹೋಗಿರುವುದೇ ಸದ್ಯದ ಸಮಸ್ಯೆಗೆ ಕಾರಣ. ನಗರ ಕಮಿಷನರೇಟ್‌ ವ್ಯಾಪ್ತಿಯ ಕೆ.ಆರ್.ಠಾಣೆ ಹಾಗೂ ಆಲನಹಳ್ಳಿ ಠಾಣೆ ಹಾಗೂ ಜಿಲ್ಲಾ ಪೊಲೀಸ್‌ ವ್ಯಾಪ್ತಿಗೆ ಸೇರಿದ ಮೈಸೂರು ದಕ್ಷಿಣ ಠಾಣೆ ತಮ್ಮ ವ್ಯಾಪ್ತಿಯ ಬೆಟ್ಟದ ಪ್ರದೇಶದ ರಕ್ಷಣೆಯ ಹೊಣೆ ಹೊತ್ತಿದೆ. ಈ ಠಾಣೆಗಳ ಕಾರ್ಯನಿರ್ವಹಣೆ ನಡುವೆ ಸಮನ್ವಯದ ಕೊರತೆಯೂ ಇದೆ. ಬೆಟ್ಟದಲ್ಲಿ ಉಪಠಾಣೆಯೇನೋ ಇದೆ. ಆದರೆ ಭದ್ರತೆ ಸಾಕಾಗದು.

ನಗರದಿಂದ 15 ಕಿ.ಮೀ ದೂರದಲ್ಲಿರುವ ಬೆಟ್ಟದ ಆಸುಪಾಸಿ ನಲ್ಲಿರುವ ತಾವರೆಕಟ್ಟೆ ಹಾಗೂ ಉತ್ತನಹಳ್ಳಿಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಮಹಾಬಲೇಶ್ವರ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ನಾರಾಯಣಸ್ವಾಮಿ ದೇವಸ್ಥಾನ ಹಾಗೂ ದೊಡ್ಡ ನಂದಿ ವಿಗ್ರಹಗಳಿವೆ. ಜೆಎಸ್‌ಎಸ್‌ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ, ಕಾಲೇಜುಗಳು, ಆಶ್ರಮಗಳು, ಮಠಗಳೂ ಇವೆ. ನೂರಾರು ವ್ಯಾಪಾರಿಗಳು ಸೇರಿದಂತೆ ಬೆಟ್ಟಕ್ಕೆ ಲಕ್ಷಾಂತರ ಮಂದಿ ಭೇಟಿ ಕೊಡುತ್ತಾರೆ. ಹೀಗಾಗಿ, ಅಲ್ಲಿ ಪ್ರತ್ಯೇಕ ‍ಪೊಲೀಸ್ ಠಾಣೆ ಬೇಕು ಎಂಬುದು ಸದ್ಯದ ಒತ್ತಾಯ. ಸಂಜೆ 6ರ ನಂತರ ಮೆಟ್ಟಿಲ ಮೂಲಕ ಬೆಟ್ಟ ಹತ್ತುವುದು ಅಪಾಯ ಎಂಬ ಪರಿಸ್ಥಿತಿ ಇದೆ. ಕತ್ತಲಲ್ಲಿ ತಪ್ಪಲಿನ ಲಲಿತಾದ್ರಿಪುರದ ಗುಡ್ಡ ಸೇರಿದಂತೆ ಹಲವೆಡೆ ಯುವಜೋಡಿಗಳು ಕಾಮುಕರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಬಳಿಕವೇ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತದೆ. ಇಲ್ಲದಿದ್ದರೆ ಅಲ್ಲಿ ‘ಏನೂ ನಡೆದಿಲ್ಲ’
ಅಷ್ಟೇ!

ADVERTISEMENT

‘ಬೆಟ್ಟಕ್ಕೆ ಸೇರಿರುವ ಶೇ 75ರಷ್ಟು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ, ಕೊಳೆತ ಸ್ಥಿತಿಯಲ್ಲಿ ಅನಾಥ ಶವಗಳೂ ಕಂಡುಬರುತ್ತವೆ. ಕೊಲೆಯೋ ಆತ್ಮಹತ್ಯೆಯೋ ಪತ್ತೆಯಾಗುವುದೇ ಇಲ್ಲ’ ಎನ್ನುತ್ತಾರೆ ನಗರದ ನಿವಾಸಿ ರಾಮಚಂದ್ರ.

‘ಹಿಂದಿನ ವಾರವಷ್ಟೇ ಉತ್ತನಹಳ್ಳಿ ಹೊರವಲಯದಲ್ಲಿ ಆಟೊ ಚಾಲಕನಿಂದ ಆಟೊವನ್ನೇ ಕಸಿದು ಮೂವರು ಪರಾರಿಯಾಗಿದ್ದರು. ಹೀಗಾಗಿ ತಪ್ಪಲಿನಲ್ಲಿ ಹಗಲಿನ ವೇಳೆ ಸಂಚರಿಸುವುದೂ ದುಸ್ತರ ಎನಿಸಿದೆ’ ಎಂದು ಆಟೋರಿಕ್ಷಾ ಚಾಲಕ ನಾಸಿರ್‌ ವಿಷಾದಿಸಿದರು.

‘ಬೆಟ್ಟದಲ್ಲಿ ವಿಶೇಷ ಪೊಲೀಸ್ ಠಾಣೆ ಸ್ಥಾಪಿಸಿ, ಹೆಚ್ಚಿನ ಸಿಬ್ಬಂದಿ ಹಾಗೂ ವಾಹನಗಳನ್ನು
ನೀಡಿದರೆ ನಿರಂತರ ಗಸ್ತು ಸಾಧ್ಯ’ ಎಂದು ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿಯ ಸಿಬ್ಬಂದಿಯೊಬ್ಬರು
ಪ್ರತಿಪಾದಿಸಿದರು.

ಅಪರಾಧದ ಬಳಿಕವಷ್ಟೇ ಗಸ್ತು!

ಬೆಟ್ಟದ ತಪ್ಪಲಿನಲ್ಲಿ ಅಪರಾಧ ಚಟುವಟಿಕೆಗಳು ಬೆಳಕಿಗೆ ಬಂದಾಗ ಮಾತ್ರ ಕೆಲವು ದಿನ ಪೊಲೀಸರು ಗಸ್ತು ನಡೆಸಿ ಸುಮ್ಮನಾಗುತ್ತಾರೆ. ನಂತರದ ದಿನಗಳಲ್ಲಿ ಭದ್ರತೆಯ ಕೊರತೆ ಮುಂದುವರಿಯುತ್ತದೆ. ‘ಆಪರೇಷನ್ ಚಾಮುಂಡಿ’ ಸೇರಿದಂತೆ ಹಲವು ಕಾರ್ಯಾಚರಣೆಗಳು ಅರ್ಧದಲ್ಲೇ ಸ್ಥಗಿತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.