ADVERTISEMENT

ಯೋಗೇಶ್ವರ್‌ಗೆ ಚನ್ನಪಟ್ಟಣ ಟಿಕೆಟ್‌: ಬಿಜೆಪಿ ನಾಯಕರ ಲಾಬಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 16:10 IST
Last Updated 30 ಆಗಸ್ಟ್ 2024, 16:10 IST
ಜೆ.ಪಿ.ನಡ್ಡಾ ಅವರಿಗೆ ಆರ್. ಅಶೋಕ ಹೂಗುಚ್ಛ ನೀಡಿದರು. ಅರವಿಂದ ಬೆಲ್ಲದ, ಸಿ.ಪಿ.ಯೋಗೇಶ್ವರ, ಸಿ.ಎನ್‌. ಅಶ್ವತ್ಥನಾರಾಯಣ ಚಿತ್ರದಲ್ಲಿದ್ದಾರೆ 
ಜೆ.ಪಿ.ನಡ್ಡಾ ಅವರಿಗೆ ಆರ್. ಅಶೋಕ ಹೂಗುಚ್ಛ ನೀಡಿದರು. ಅರವಿಂದ ಬೆಲ್ಲದ, ಸಿ.ಪಿ.ಯೋಗೇಶ್ವರ, ಸಿ.ಎನ್‌. ಅಶ್ವತ್ಥನಾರಾಯಣ ಚಿತ್ರದಲ್ಲಿದ್ದಾರೆ    

ನವದೆಹಲಿ: ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ನಾಯಕರ ನಿಯೋಗವು ಬಿಜೆ‍ಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್‌ ಅವರಿಗೆ ಶುಕ್ರವಾರ ಮನವಿ ಮಾಡಿತು.

ನಿಯೋಗದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಉಪನಾಯಕ ಅರವಿಂದ ಬೆಲ್ಲದ, ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಸಿ.ಪಿ.ಯೋಗೇಶ್ವರ ಇದ್ದರು. 

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅಶೋಕ, ‘ಚನ್ನಪಟ್ಟಣದ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಗುರುವಾರ ರಾತ್ರಿ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ. ನಡ್ಡಾ ಹಾಗೂ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಟಿಕೆಟ್‌ ಬಗ್ಗೆ ಎನ್‌ಡಿಎ ನಾಯಕರು ತೀರ್ಮಾನ ಮಾಡುತ್ತಾರೆ’ ಎಂದರು. 

ADVERTISEMENT

‘ಡಿ.ಕೆ. ಶಿವಕುಮಾರ್ ಅವರು ಚನ್ನಪಟ್ಟಣಕ್ಕೆ ಹೋಗಿ ಜನರ ಕಿವಿ ಮೇಲೆ ಹೂವಿಡಲು ಸಾದ್ಯವಿಲ್ಲ. ಚನ್ನಪಟ್ಟಣದ ಜನ ಜಾಣರಿದ್ದಾರೆ. ಮಂಡ್ಯದ ವಿಚಾರದಲ್ಲೂ ಅದೇ ರೀತಿಯಲ್ಲಿ ಹೇಳಿದ್ದರು. ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ ಹೋಗಲಿದ್ದಾರೆ ಎಂದಿದ್ದರು. ಕುಮಾರಸ್ವಾಮಿ ಎರಡೇ ದಿನ ಪ್ರಚಾರ ಮಾಡಿ ‍ಪ‍್ರಚಂಡ ಜಯ ಗಳಿಸಿದರು’ ಎಂದರು. 

‘ಶಿವಕುಮಾರ್ ಅವರು ವಿಸಿಟಿಂಗ್‌ ಡಾಕ್ಟರ್ ಇದ್ದಂತೆ. ಚುನಾವಣೆ ಬಂದಾಗ ಮಾತ್ರ ಅವರು ಕ್ಷೇತ್ರಕ್ಕೆ ಹೋಗುತ್ತಾರೆ’ ಎಂದು ವ್ಯಂಗ್ಯವಾಡಿದರು. 

‘ನಿಖಿಲ್‌ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ನೆಚ್ಚಿನ ಕ್ಷೇತ್ರ. ಅವರು ಜೆಡಿಎಸ್‌ ಯುವ ಘಟಕದ ಅಧ್ಯಕ್ಷರು. ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಕುರಿತು ಅವರೇ ಉತ್ತರ ನೀಡಲಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.