ADVERTISEMENT

ಲಾಕ್‌ಡೌನ್, ಕರ್ಫ್ಯೂ ಇಲ್ಲ; ಒಳಾಂಗಣ ಕಾರ್ಯಕ್ರಮಗಳಿಗೆ ನಿರ್ಬಂಧ-ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 18:49 IST
Last Updated 17 ಮಾರ್ಚ್ 2021, 18:49 IST
ಮುಖ್ಯಮಂತ್ರಿ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ   

ಬೆಂಗಳೂರು: ‘ರಾಜ್ಯದಲ್ಲಿ ಲಾಕ್‌ಡೌನ್‌ ಅಥವಾ ರಾತ್ರಿ ಕರ್ಪ್ಯೂ ಹೇರುವ ಉದ್ದೇಶ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಕೋವಿಡ್ ಪರಿಸ್ಥಿತಿ ಕುರಿತಂತೆ ಪ್ರಧಾನಿ ಜೊತೆ ಬುಧವಾರ ವಿಡಿಯೊ ಸಂವಾದದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಾಸ್ಕ್ ಕಡ್ಡಾಯವಾಗಿ ಹಾಕಬೇಕು. ವೈಯಕ್ತಿಕ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಹೊಸ‌ ಮಾರ್ಗಸೂಚಿ ಹೊರಡಿಸುವುದಿಲ್ಲ. ಈಗಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್‌ ಸೋಂಕು ಹರಡುವುದನ್ನು ತಡೆಯಲು ಮದುವೆ, ಜನ್ಮದಿನ ಕಾರ್ಯಕ್ರಮ ಮತ್ತಿತರ ಎಲ್ಲ ರೀತಿಯ ಒಳಾಂಗಣ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗುವುದು. ನಮ್ಮ ಗಮನ ನಾಲ್ಕು ಗೋಡೆಗಳ ಒಳಗೆ ಹೆಚ್ಚು ಜನರು ಸೇರುವ ದೊಡ್ಡ ಕಾರ್ಯಕ್ರಮಗಳನ್ನು ನಿಯಂತ್ರಿಸುವುದರ ಮೇಲಿರುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆ ಸೇರಿದಂತೆ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಆದರೆ, ಹೊರಾಂಗಣ ಕಾರ್ಯಕ್ರಮಗಳಿಗೆ ಹೆಚ್ಚಿನ ನಿರ್ಬಂಧ ಇಲ್ಲ’ ಎಂದರು.

ADVERTISEMENT

‘ಎರಡಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ಕಂಡುಬಂದ ಪ್ರದೇಶವನ್ನು ಮೈಕ್ರೊ ಕಂಟೇನ್‌ಮೆಂಟ್‌ ವಲಯವಾಗಿ ಘೋಷಿಸಲು ಯೋಜಿಸಲಾಗಿದೆ’ ಎಂದ ಮುಖ್ಯಮಂತ್ರಿ, ‘ರಾಜ್ಯದಲ್ಲಿ ಹತ್ತು ದಿನಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ. ಕೋವಿಡ್‌ ಚಿಕಿತ್ಸಾ ನಿರ್ವಹಣೆಯ ಮಾರ್ಗಸೂಚಿಗಳ ಪಾಲನೆ, ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, (ಟೆಸ್ಟ್, ಟ್ರಾಕ್, ಟ್ರೀಟ್) ಮಾದರಿ ತೀವ್ರಗೊಳಿಸುವಂತೆ ಪ್ರಧಾನಿ ತಿಳಿಸಿದ್ದಾರೆ. ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಪರೀಕ್ಷೆ ಹೆಚ್ಚಿಸಲಾಗುವುದು’ ಎಂದರು.

ಬೆಂಗಳೂರಿನಲ್ಲಿ 3 ಕೇಂದ್ರ: ‘ಕೋವಿಡ್ ಸೋಂಕಿತರಿಗಾಗಿ ಹೆಚ್ಚುವರಿ ಹಾಸಿಗೆಗಳು, ಐಸಿಯುಗಳನ್ನು ಮೀಸಲಿಡಲಾಗುವುದು. ಬೆಂಗಳೂರಿನಲ್ಲಿ ಮೂರು ಕೋವಿಡ್ ಕೇರ್ ಸೆಂಟರ್‌ ಸ್ಥಾಪಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿರುವ 3,500ಕ್ಕೂ ಹೆಚ್ಚಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲಾಗುವುದು. ಪ್ರತಿ ದಿನ 3 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ’ ಎಂದೂ ಹೇಳಿದರು.

‘ಎರಡು ಮತ್ತು ಮೂರನೇ ಹಂತದ ಪಟ್ಟಣಗಳಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಳಕ್ಕೆ ಪ್ರಧಾನಿ ಸೂಚಿಸಿದ್ದಾರೆ. ಸದ್ಯ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ಹಾಕಲಾಗುತ್ತಿದೆ. ವೃದ್ಧಾಶ್ರಮ, ಅಪಾರ್ಟ್‌ಮೆಂಟ್‌ ಸಮುಚ್ಚಯ, ದುರ್ಗಮ ಪ್ರದೇಶಗಳಲ್ಲೂ ಲಸಿಕೆ ಅಭಿಯಾನಕ್ಕೆ ಅನುಮತಿ ಕೇಳಿದ್ದೇವೆ’ ಎಂದರು.

‘ರಾಜ್ಯದಲ್ಲಿ 2,042 ಆಸ್ಪತ್ರೆಗಳು ಕೋವಿಡ್ ಲಸಿಕೆಗೆ ನೋಂದಾಯಿಸಿಕೊಂಡಿವೆ. ಈ ಪೈಕಿ, 1,439 ಆಸ್ಪತ್ರೆಗಳಲ್ಲಿ ಲಸಿಕೆ ಅಭಿಯಾನ ಆರಂಭಿಸಿಲ್ಲ. ಈ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲು ಕ್ರಮವಹಿಸಲು ಸೂಚಿಸಿದ್ದಾರೆ. ಶೇ 93ರಷ್ಟು ಆರ್‌ಟಿಪಿಸಿಆರ್ ಟೆಸ್ಟಿಂಗ್‌ ಗುರಿ ಸಾಧಿಸಲಾಗಿದ್ದು, ಇದಕ್ಕೆ ಕೇಂದ್ರ ಗೃಹ ಸಚಿವರಿಂದ ಶ್ಲಾಘನೆ ಸಿಕ್ಕಿದೆ. ಬೀದರ್, ಕಲಬುರ್ಗಿ, ಬೆಂಗಳೂರು ಜಿಲ್ಲೆಗಳಿಗೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಲು ಸಲಹೆ ಕೊಟ್ಟಿದ್ದಾರೆ. ಪ್ರತಿ ದಿನ 3 ಲಕ್ಷ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆಗಳು ವ್ಯರ್ಥ ಆಗುವುದನ್ನು ತಡೆಯಲು ಪ್ರಧಾನಿ ಸೂಚಿಸಿದ್ದಾರೆ’ ಎಂದೂ ಮುಖ್ಯಮಂತ್ರಿ ಹೇಳಿದರು.

‘ಏರುಗತಿ ಮುಂದುವರಿದರೆ ವಿಚಾರಣೆ’

‘ಕೋವಿಡ್‌ ಪ್ರಕರಣಗಳ ಏರುಗತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ಕೋವಿಡ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ.

‘ಕಳೆದ ಕೆಲ ದಿನಗಳಲ್ಲಿ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವುದನ್ನು ಹೈಕೋರ್ಟ್ ಗಮನಿಸುತ್ತಿದೆ. ವಿಶೇಷವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಪ್ರವೃತ್ತಿ ಮುಂದುವರಿದರೆ ಬಿಬಿಎಂಪಿ ಮತ್ತು ಇತರ ಪ್ರಾಧಿಕಾರಿಗಳ ವಿರುದ್ಧ ವಿಚಾರಣೆ ಆರಂಭಿಸಬೇಕಾಗುತ್ತದೆ’ ಎಂದು ತಿಳಿಸಿದ ಪೀಠವು ಮಾ.25ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.