ADVERTISEMENT

ಕಾರಿನ ಮೇಲೆ ‘ಕರ್ನಾಟಕ ಸರ್ಕಾರ’ ಲಾಂಛನ: ಸಿಎಂ ನಕಲಿ ವಿಶೇಷ ಅಧಿಕಾರಿ ಸೆರೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 3:01 IST
Last Updated 16 ಡಿಸೆಂಬರ್ 2021, 3:01 IST
ಉದಯ ಪ್ರಭು
ಉದಯ ಪ್ರಭು   

ಬೆಂಗಳೂರು: ಮುಖ್ಯಮಂತ್ರಿಯವರ ವಿಶೇಷ ಅಧಿಕಾರಿ ಎಂಬುದಾಗಿ ಹೇಳಿಕೊಂಡು ನಾನಾ ರೀತಿಯ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ಪಿ. ಉದಯಪ್ರಭು (34) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಮೈಲಸಂದ್ರದ ಆರೋಪಿ ಉದಯಪ್ರಭು, ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದ. ತನ್ನ ಕಾರಿನ ಮೇಲೆ ‘ಕರ್ನಾಟಕ ಸರ್ಕಾರ’ ಎಂಬ ಲಾಂಛನ ಹಾಕಿಸಿಕೊಂಡಿದ್ದ. ಆತನಿಂದ ₹ 1.20 ಲಕ್ಷ ನಗದು, ಇನ್ನೋವಾ ಕಾರು, ಲ್ಯಾಪ್‌ಟಾಪ್, ಮೂರು ಐಫೋನ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕಾಟನ್‌ಪೇಟೆಯಲ್ಲಿ ಬಾಳೆಹಣ್ಣು ಹೋಲ್‌ಸೇಲ್ ಮಾರಾಟ ಮಳಿಗೆ ನಡೆಸುತ್ತಿರುವ ಆರೋಪಿ, ಬಿಳಿ ಬಣ್ಣದ ಇನ್ನೋವಾ ಕಾರು) ಇಟ್ಟುಕೊಂಡಿದ್ದ. ಕಾರಿನ ಮುಂಭಾಗ, ಹಿಂಭಾಗದಲ್ಲಿ ಕರ್ನಾಟಕ ಸರ್ಕಾರ ಲಾಂಛನ ಹಾಕಿಸಿದ್ದ. ನೋಂದಣಿ ಫಲಕದಲ್ಲೂ ‘ಕರ್ನಾಟಕ ಸರ್ಕಾರ’ ಎಂಬುದಾಗಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಬರೆಸಿದ್ದ. ಆರೋಪಿ ಕಾರಿನ ಬಗ್ಗೆ ಅನುಮಾನಗೊಂಡಿದ್ದ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದರು. ಕಾರು ಪತ್ತೆಗಾಗಿ ಸಿಸಿಬಿ ಇನ್‌ಸ್ಪೆಕ್ಟರ್ ಎಂ.ಎಂ. ಭರತ್ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿತ್ತು’

ADVERTISEMENT

‘ತಾನೊಬ್ಬ ಸಚಿವಾಲಯದ ವಿಶೇಷ ಅಧಿಕಾರಿ ಎಂದಿದ್ದ. ಆರೋಪಿ ಗುರುತಿನ ಚೀಟಿ ಸಹ ತೋರಿಸಿದ್ದ. ಅದನ್ನು ಪರಿಶೀಲಿಸಿದಾಗ ನಕಲಿ ಎಂಬುದು ತಿಳಿಯಿತು. ನಂತರವೇ ಆರೋಪಿಯನ್ನು ಬಂಧಿಸಲಾಯಿತು’ ಎಂದೂ ಅಧಿಕಾರಿ ತಿಳಿಸಿದರು.

‘ವಿಶೇಷ ಅಧಿಕಾರಿ ಸೋಗಿನಲ್ಲಿ ಸರ್ಕಾರದಿಂದ ಟೆಂಡರ್ ಕೊಡಿಸುವ ಹಾಗೂ ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡುತ್ತಿದ್ದ. ಅದಕ್ಕೆಂದು ಲಕ್ಷ ಲಕ್ಷ ಹಣ ಪಡೆಯುತ್ತಿದ್ದನೆಂಬ ಮಾಹಿತಿ ಇದೆ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

‘ಸಚಿವಾಲಯದ ಸಿಬ್ಬಂದಿ ಒಡನಾಟ’
‘ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಕೆಲ ಸಿಬ್ಬಂದಿ ಜೊತೆ ಆರೋಪಿ ಉದಯಪ್ರಭು ಒಡನಾಟ ಹೊಂದಿರುವ ಮಾಹಿತಿ ಇದೆ. ಅವರನ್ನೂ ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.