ಹುಬ್ಬಳ್ಳಿ: ಕೋವಿಡ್ ಲಸಿಕೆ ಬಗ್ಗೆ ಟೀಕೆ ಮಾಡುವ ಸಿದ್ದರಾಮಯ್ಯ ಅವರಿಗೆ 100 ಕೋಟಿ ಡೋಸ್ ಲಸಿಕೆ ಪಡೆದ ಜನರೇ ಎದ್ದುನಿಂತು ಉತ್ತರ ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಲಸಿಕೆ ಎಂಬುದೇ ಸುಳ್ಳು ಎಂದು ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಅಷ್ಟೊಂದು ಜನಕ್ಕೆ ಲಸಿಕೆ ಕೊಟ್ಟೇ ಇಲ್ಲ ಎನ್ನುತ್ತಿದ್ದಾರೆ. ಇಂಥ ಪ್ರಶ್ನೆಗಳು ಬರುತ್ತವೆ ಎನ್ನುವ ಕಾರಣಕ್ಕಾಗಿಯೇ ಲಸಿಕೆ ಪಡೆದವರ ಮಾಹಿತಿ ಸಂಗ್ರಹಿಸಲಾಗಿದೆ. ಆಧಾರ್ ಸಂಖ್ಯೆಯನ್ನು ಅದಕ್ಕೆ ಜೋಡಿಸಲಾಗಿದೆ. ವೈಜ್ಞಾನಿಕವಾಗಿ ದಾಖಲೆ ನೋಂದಣೆ ಮಾಡಿಯೇ ಲಸಿಕೆ ನೀಡಲಾಗಿದೆ. 100 ಕೋಟಿ ಡೋಸ್ ಲಸಿಕೆ ಕೊಟ್ಟಿದ್ದು ನಿಜ. ಅವರ ಆರೋಪದಲ್ಲಿ ಏನೂ ನಿಜವಿಲ್ಲ ಎಂದರು.
ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯವರು ಚೀಲದಲ್ಲಿ ಹಣ ಹೊತ್ತು ತಂದಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿ ‘ಕುಂದಗೋಳ ಸೇರಿದಂತೆ ಹಿಂದಿನ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಸೇರಿದಂತೆ ಹಲವರು ಈ ರೀತಿ ಹೇಳುವುದು ರೆಡಿಮೇಡ್ ಕಾಮನ್ ಡೈಲಾಗ್’ ಎಂದು ಜರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.