ADVERTISEMENT

‘ಭಾವಿ ಸಿ.ಎಂ’: ಶಿಸ್ತು ಸಮಿತಿ ದೂರು ದಾಖಲು

ವೈಯಕ್ತಿಕ ಅಭಿಪ್ರಾಯ ಹೇಳುವಂತಿಲ್ಲ: ರೆಹಮಾನ್ ಖಾನ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 20:56 IST
Last Updated 27 ಜೂನ್ 2021, 20:56 IST
ರೆಹಮಾನ್‌ ಖಾನ್
ರೆಹಮಾನ್‌ ಖಾನ್   

ಬೆಂಗಳೂರು: ‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ’ ಎಂದು ಪಕ್ಷದ ಶಾಸಕ ಜಮೀರ್ ಅಹ್ಮದ್‌ ಖಾನ್‌ ಹೇಳಿಕೆ ನೀಡಿದ ಬೆನ್ನಲ್ಲೆ, ಇತರ ಕೆಲವು ಶಾಸಕರೂ ಧ್ವನಿಗೂಡಿಸುತ್ತಿರುವುದನ್ನು ರಾಜ್ಯ ಕಾಂಗ್ರೆಸ್‌ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿದೆ.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಎಚ್ಚರಿಕೆ ನೀಡಿದ ಬಳಿಕವೂ ಕೆಲವರು ಅದೇ ಧಾಟಿಯಲ್ಲಿ ಹೇಳಿಕೆ ಮುಂದುವರಿಸಿರುವುದರಿಂದ, ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಸಮಿತಿ, ಹೇಳಿಕೆ ನೀಡುವವರ ವಿರುದ್ಧ ಚಾಟಿ ಬೀಸಲು ಮುಂದಾಗಿದೆ.

ಭಾನುವಾರ ‘ವರ್ಚುವಲ್‌’ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಮಿತಿಯ ಅಧ್ಯಕ್ಷ ಕೆ. ರೆಹಮಾನ್ ಖಾನ್, ‘ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದಾಗಿ ಕೆಲವು ಶಾಸಕರು ನೀಡುತ್ತಿರುವ ಹೇಳಿಕೆಗಳು ಪಕ್ಷದ ಶಿಸ್ತು ಉಲ್ಲಂಘನೆ. ಪಕ್ಷದಲ್ಲಿದ್ದುಕೊಂಡು ವೈಯಕ್ತಿಕ ಅಭಿಪ್ರಾಯ ಹೇಳಲು ಅವಕಾಶ ಇಲ್ಲ. ಈ ರೀತಿ ಹೇಳಿಕೆ ನೀಡಿರುವ ಶಾಸಕರಿಗೆ ನೋಟಿಸ್‌ ನೀಡಿ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಶೀಘ್ರವೇ ತೀರ್ಮಾನಿಸುತ್ತೇವೆ’ ಎಂದರು.

ADVERTISEMENT

‘ಶಾಸಕರು ನೀಡಿರುವ ಹೇಳಿಕೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಶಾಸಕರ ಹೇಳಿಕೆಗಳಿಗೆ ಸಂಬಂಧಿಸಿದ ಪತ್ರಿಕಾ ತುಣುಕುಗಳು ಸೇರಿದಂತೆ ಯಾವುದೇ ಸಾಕ್ಷ್ಯಗಳು ಸದ್ಯ ಸಮಿತಿಯ ಬಳಿ ಇಲ್ಲ. ಅವುಗಳನ್ನು ಸಂಗ್ರಹಿಸಿ, ವಿವರವಾಗಿ ಚರ್ಚಿಸಲು ಸಮಯಾವಕಾಶ ಬೇಕು. ಹೀಗಾಗಿ ಮುಂದಿನ ವಾರ ಮತ್ತೆ ಸಭೆ ನಡೆಸಿ, ಸಮಗ್ರವಾಗಿ ಚರ್ಚಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ನಿರ್ಧರಿಸುತ್ತೇವೆ’ ಎಂದರು.

‘ವೈಯಕ್ತಿಕ ಹೇಳಿಕೆ ಕೊಡುವುದು ಪಕ್ಷದ ಸಂವಿಧಾನದ ಪ್ರಕಾರ ಅಶಿಸ್ತು. ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುವುದು ಸಾರ್ವಜನಿಕರಲ್ಲ.ಪಕ್ಷದ ಶಾಸಕರು, ಹೈಕಮಾಂಡ್‌. ಹೀಗಾಗಿ, ಶಾಸಕರು ಶಾಸಕಾಂಗ ಸಭೆಯಲ್ಲಿ ಮಾತ್ರ ಮಾತನಾಡಬಹುದು. ವೈಯಕ್ತಿಕ ಅಭಿಪ್ರಾಯವನ್ನು ಕೆಪಿಸಿಸಿ ಅಧ್ಯಕ್ಷರಿಗೆ, ರಾಷ್ಟ್ರೀಯ ಅಧ್ಯಕ್ಷರಿಗೆ ಹೇಳಬಹುದು. ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಅಶಿಸ್ತು’ ಎಂದು ಖಾನ್‌ ಪ್ರತಿಪಾದಿಸಿದರು.

‘ಮಾಧ್ಯಮಗಳ ಮುಂದೆ ಈ ರೀತಿ ವೈಯಕ್ತಿಕ ಹೇಳಿಕೆ ನೀಡದಂತೆ ಹೈಕಮಾಂಡ್‌ ಈಗಾಗಲೇ ಸೂಚನೆ ನೀಡಿದೆ. ನಾವೂ ಮನವಿ ಮಾಡಿದ್ದೇವೆ. ಇದರಿಂದ ಪಕ್ಷಕ್ಕೆ ಒಳ್ಳೆಯದಲ್ಲ’ ಎಂದರು.

‘ಆರ್‌.ಆರ್‌. ನಗರ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲೂ ಇದೇ ರೀತಿಯ ಹೇಳಿಕೆ ನೀಡಿದ ಕಾರಣಕ್ಕೆ ನೋಟಿಸ್‌ ನೀಡಿ ಎಚ್ಚರಿಕೆ ಕೊಟ್ಟಿದ್ದೆವು. ಉಪ ಚುನಾವಣೆ, ಬಳಿಕ ಕೋವಿಡ್‌ ಕಾರಣಕ್ಕೆ ನೋಟಿಸ್‌ ಪಡೆದವರನ್ನು ನೇರವಾಗಿ ಕರೆದು ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಅದನ್ನೂ ಈಗ ಗಣನೆಗೆ ತೆಗೆದುಕೊಳ್ಳುತ್ತೇವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.