ADVERTISEMENT

ಮುಖ್ಯಮಂತ್ರಿ ಬದಲಾವಣೆ ವದಂತಿ: ಮುಂದುವರಿದ ಬಿಜೆಪಿ– ಕಾಂಗ್ರೆಸ್‌ ವಾಗ್ಯುದ್ಧ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 7:18 IST
Last Updated 10 ಆಗಸ್ಟ್ 2022, 7:18 IST
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಿ ಮರಳಿದ ಬೆನ್ನಲ್ಲೆ ಆರಂಭಗೊಂಡಿರುವ ಮುಖ್ಯಮಂತ್ರಿ ಬದಲಾವಣೆ ವದಂತಿಗಳು ಇದೀಗ ರಾಜ್ಯ ರಾಜಕೀಯದಲ್ಲಿ ಬಿಜೆಪಿ– ಕಾಂಗ್ರೆಸ್‌ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

‘ಕರ್ನಾಟಕದಲ್ಲಿ 3ನೇ ಮುಖ್ಯಮಂತ್ರಿಯ ಕಾಲ ಸನ್ನಿಹಿತ’ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಟ್ವೀಟ್‌ ಮಾಡಿದ ಬೆನ್ನಲ್ಲೆ, ಬಿಜೆಪಿಯ ನಾಯಕರು, ಸಚಿವರು ಕಾಂಗ್ರೆಸ್‌ ನಾಯಕರ ಮೇಲೆ ಮುಗಿಬಿದ್ದಿದ್ದಾರೆ.

‘ಬಿಜೆಪಿಯ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಅಧಿಕಾರ ಕಾಂಗ್ರೆಸ್ಸಿಗೆ ಇದ್ದಿದ್ದರೆ ಅವರೇ ಮಾಡಿ ಬಿಡುತ್ತಿದ್ದರು‘ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ನಡೆಸುವ ರೀತಿ ನೋಡಿ ಕಾಂಗ್ರೆಸ್ಸಿನವರಿಗೆ ತಲೆ ಕೆಟ್ಟು ಹೋಗಿದೆ. ಅಭಿವೃದ್ಧಿ ಕೆಲಸ ಅವರನ್ನು ಕಂಗೆಡಿಸಿದೆ. ಸುಳ್ಳು ಹೇಳಿ ವರ್ಚಸ್ಸು ಜಾಸ್ತಿ ಮಾಡಿಕೊಳ್ಳಲು ಅವರು ಹೊರಟಿದ್ದಾರೆ. ಆದರೆ, ಜನ ಅವರನ್ನು ನೋಡಿ ನಗುತ್ತಾರೆ’ ಎಂದರು.

ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ , ‘ಅದನ್ನು (ಮುಖ್ಯಮಂತ್ರಿ ಬದಲಾವಣೆ) ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವ್ಯಾರು ಹೇಳೋಕೆ?’ ಎಂದರು.

‘ಬೊಮ್ಮಾಯಿ‌ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ‌. ಕಾಂಗ್ರೆಸ್‌ನವರು ಬಹಳ ಅವಸರದವರು. ದಾವಣಗೆರೆ ಸಮಾವೇಶದ ಬಳಿಕ ಜನ ಎಲ್ಲ ಡಬ್ಬಗಳನ್ನು ತುಂಬುತ್ತಾರೆ ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಎಲ್ಲರನ್ನೂ ನಿಂದಿಸಲು ಶುರು ಮಾಡಿದ್ದಾರೆ. ದುರ್ಯೋಧನ, ದುಶ್ಯಾಸನ ನಡವಳಿಕೆ ಬಹಳ ದಿನ ಉಳಿಯುವುದಿಲ್ಲ’ ಎಂದರು.

‘ಕಾಂಗ್ರೆಸ್‌ನಲ್ಲಿ ಕೆಲವರು ಈಗಾಗಲೇ ಮಂತ್ರಿ ಆಗಿದ್ದಾರೆ. ಇಲಾಖೆ ಕೂಡ ಹಂಚಿಕೊಂಡಿದ್ದಾರೆ’ ಎಂದ ಲವಡಿ ಮಾಡಿದ ಅವರು, ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶ್ಯಾಡೋ ಸಿಎಂ ಆಗಿರಬೇಕು. ಆದರೆ, ಅವರು ಅವರ ಜವಾಬ್ದಾರಿ ನಿಭಾಯಿಸುತ್ತಿಲ್ಲ. ಅಂಥವರಿಗೆ ಬೇರೆಯವರ ಜವಾಬ್ದಾರಿ ಬಗ್ಗೆ ಟೀಕೆ ಮಾಡುವ ಅಧಿಕಾರ ಏನಿದೆ’ ಎಂದು ಪ್ರಶ್ನಿಸಿದರು.

ತಮ್ಮ ಮಗ ಕಾಂಗ್ರೆಸ್ ಸೇರುವ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ‘ಈಗಾಗಲೇ ಮಗನಿಗೆ 42 ವರ್ಷ ಆಗಿದೆ. ಅವರವರ ದಾರಿ ಅವರು ನೋಡಿಕೊಂಡು ಹೋಗುತ್ತಾರೆ. ಮಕ್ಕಳಿಗೆ ಸ್ವಾತಂತ್ರ್ಯ ಕೊಡದೆ ಇರಲು ಆಗುತ್ತದೆಯೇ? ಮಗ ಹೋಗುವುದು ಬೇರೆ. ನಾನು ಕಾಂಗ್ರೆಸ್‌ ನಡವಳಿಕೆಯನ್ನು ಟೀಕೆ ಮಾಡುವುದು ಬೇರೆ. ನಾನು ಎಲ್ಲ ಪಕ್ಷದ್ದು ಏನಿದೆಯೋ ಅದನ್ನ ಹೇಳ್ತೇನೆ. ನಾನು ಒಂಥರಾ ಸುಡುಗಾಡು ಸಿದ್ದ ಹಾಗೆ’ ಎಂದರು.

ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ‘ಕಾಂಗ್ರೆಸ್ಸಿನವರು ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಸುಸ್ಥಿರ ಸರ್ಕಾರ ಅಧಿಕಾರದಲ್ಲಿದೆ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಸಿಎಂ ಬದಲಾವಣೆ ಸುದ್ದಿಗೆ ಮೂಲ ಬಿಜೆಪಿ. ಬಿಜೆಪಿ ನಾಯಕರು, ಮಾಜಿ ಶಾಸಕರೇ ಈ ವಿಷಯ ಹೇಳುತ್ತಿದ್ದಾರೆ. ಅವರು ಹೇಳಿದ್ದನ್ನೇ ನಾವು ಪಿಕ್ ಮಾಡಿದ್ದೇವೆ. ಬಿಜೆಪಿ ಅವರೇ ನೀಡಿದ ಆಹಾರ, ಅವರೇ ನೀಡಿದ ಮಾಹಿತಿ’ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.