ADVERTISEMENT

ಮುಖ್ಯಮಂತ್ರಿ: ಸಂಭಾವ್ಯ ಅಭ್ಯರ್ಥಿಗಳ ಬಲಾಬಲ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 19:37 IST
Last Updated 26 ಜುಲೈ 2021, 19:37 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ   

ಬೆಂಗಳೂರು: ರಾಜ್ಯದ ಮುಂದಿನ ಮುಖ್ಯಮಂತ್ರಿ ಗಾದಿ ಎಂಬ ಕುತೂಹಲ ಈಗ ತೀವ್ರವಾಗಿದೆ. ಬಿಜೆಪಿ ಹೈಕಮಾಂಡ್‌ ಭಾಗವಾಗಿರುವ ನಾಯಕರು, ಹಿರಿಯ ಸಚಿವರು, ಶಾಸಕರು ಸೇರಿದಂತೆ ಹಲವರ ಹೆಸರುಗಳು ಸಂಭವನೀಯರ ಪಟ್ಟಿಯಲ್ಲಿವೆ. ಸಂಭವನೀಯರ ಪಟ್ಟಿಯಲ್ಲಿರುವರ ಸಾಮರ್ಥ್ಯ– ದೌರ್ಬಲ್ಯದ ಅಂಶಗಳೇನು ಎಂಬ ವಿವರ ಇಲ್ಲಿದೆ.

ಪ್ರಲ್ಹಾದ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಉತ್ತರ ಕರ್ನಾಟಕದವರು, ಸಂಘ ಪರಿವಾರದ ನಿಷ್ಠಾವಂತ ಮತ್ತು ಪ್ರಧಾನಿ ಮೋದಿ ಅವರೊಂದಿಗಿನ ನಿಕಟ ಒಡನಾಟ ಇರುವುದು ವರದಾನವಾಗಬಹುದು. ವಿವಾದಗಳಿಲ್ಲ. ಆದರೆ, ಸುಸೂತ್ರವಾಗಿ ಸಂಸದೀಯ ವ್ಯವಹಾರಗಳ ಖಾತೆ ನಿರ್ವಹಿಸುತ್ತಿರುವ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವುದು ಅನುಮಾನ.

ADVERTISEMENT

ಜಗದೀಶ ಶೆಟ್ಟರ್‌

ಜಗದೀಶ ಶೆಟ್ಟರ್‌ ಒಮ್ಮೆ ಮುಖ್ಯಮಂತ್ರಿ ಆಗಿದ್ದವರು. ಪರಿವಾರದ ಮೂಲ, ಉತ್ತರ ಕರ್ನಾಟಕ ಮತ್ತು ಲಿಂಗಾಯತ ಸಮುದಾಯದವರು ಅನುಕೂಲಕರ ಅಂಶ. ಯಡಿಯೂರಪ್ಪ ಅವರ ಜತೆಯಲ್ಲೇ ಅವರ ಸಮಕಾಲೀನರನ್ನೂ ಸರ್ಕಾರದಿಂದ ಹೊರಗಿಡುವ ಪ್ರಸ್ತಾವವು ಶೆಟ್ಟರ್‌ಗೆ ಅಡ್ಡಿಯಾಗಬಹುದು.

ಬಿ.ಎಲ್‌. ಸಂತೋಷ್‌

’ಸಂಘ’ದಿಂದ ಬಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್‌. ಸಂತೋಷ್‌ ಪಕ್ಷದ ಹೈಕಮಾಂಡ್‌ನ ಭಾಗವಾಗಿಯೇ ಇರುವವರು. ಸದ್ಯ ಬಿಜೆಪಿ ನಾಯಕತ್ವ ಬಯಸುವ ಹಿಂದುತ್ವ ಪರ ಸರ್ಕಾರಕ್ಕೆ ಸೂಕ್ತ ಆಯ್ಕೆ ಎನಿಸಬಹುದು. ಅವರು ಮುಖ್ಯಮಂತ್ರಿ ಹುದ್ದೆಗೇರುವುದಾದರೆ ಆರ್‌ಎಸ್‌ಎಸ್‌ ಅನುಮತಿಯೂ ಬೇಕಿದೆ.

ಸಿ.ಟಿ. ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಪಕ್ಷ ನಿಷ್ಠರು, ಯಾವುದೇ ತ್ಯಾಗಕ್ಕೂ ಸಿದ್ಧ ಎಂಬ ಅಭಿಪ್ರಾಯವಿದೆ. ಒಕ್ಕಲಿಗರು. ಜಾತಿಗಿಂತಲೂ ಹೆಚ್ಚಾಗಿ ‘ಹಿಂದುತ್ವದ ನಾಯಕ’ ಎಂಬುದು ಅನುಕೂಲಕರ. ಆದರೆ, ಸರ್ಕಾರ ಮುನ್ನಡೆಸಲು ಅನುಭವದ ಕೊರತೆ ಜೊತೆಗೆ ಕೆಲವೊಮ್ಮೆ ಪ್ರಬುದ್ಧವಲ್ಲದ ರೀತಿಯಲ್ಲಿ ಮಾತನಾಡುತ್ತಾರೆ ಎಂಬ ಅಪವಾದವೂ ಇದೆ.

ಮುರುಗೇಶ ನಿರಾಣಿ

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಮುರುಗೇಶ ನಿರಾಣಿ ಪ್ರಬಲ ಆಕಾಂಕ್ಷಿ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ಜತೆಗೆ ವ್ಯಾವಹಾರಿಕ ನಂಟು ಹೊಂದಿರುವುದು ಇವರ ಪ್ರಬಲ ಶಕ್ತಿ. ಉತ್ತರ ಕರ್ನಾಟಕ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಆದ್ಯತೆ ನೀಡುವುದಾದಲ್ಲಿ ಇವರಿಗೆ ಆದ್ಯತೆ ಸಿಗಬಹುದು.

ವಿಶ್ವೇಶ್ವರ ಹೆಗಡೆ ಕಾಗೇರಿ

ಆರ್‌ಎಸ್‌ಎಸ್‌ ಕಾರ್ಯಕರ್ತರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಬ್ರಾಹ್ಮಣ ಸಮುದಾಯದಿಂದ ಕೇಳಿಬರುತ್ತಿರುವ ಹೆಸರುಗಳಲ್ಲಿ ಒಂದು. ಸಂಘ ಪರಿವಾರದ ಬೆಂಬಲವೂ ಇದೆ. ಮತದಾರರನ್ನು ಆಕರ್ಷಿಸಬಲ್ಲ ನಾಯಕತ್ವ ಇಲ್ಲ ಎಂಬುದು ಋಣಾತ್ಮಕ ಅಂಶ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಅವರನ್ನು ಯಡಿಯೂರಪ್ಪ ಅವರ ಆಪ್ತ ಎಂದೇ ಗುರುತಿಸಲಾಗುತ್ತಿದೆ. ಲಿಂಗಾಯತರಾಗಿರುವುದು, ಬಿ.ಎಲ್‌.ಸಂತೋಷ್‌ ಜತೆಗಿನ ಒಡನಾಟ ಮತ್ತು ಅವರ ಆಶಯಕ್ಕೆ ತಕ್ಕಂತೆ ಗೃಹ ಇಲಾಖೆಯನ್ನು ನಿರ್ವಹಿಸಿದ್ದಾರೆಂಬುದೂ ವರದಾನವಾಗಬಹುದು. ಆದರೆ, ಹೊರಗಿನಿಂದ ಬಂದವರು ಎಂಬುದು ಇವರಿಗಿರುವ ದೊಡ್ಡ ಅಡ್ಡಿ.

ಶಿವಕುಮಾರ ಉದಾಸಿ

ಹಾವೇರಿ ಸಂಸದ ಶಿವಕುಮಾರ್‌ ಉದಾಸಿ ಕೂಡ ಯುವಕರು. ಮೂರನೇ ಅವಧಿಗೆ ಸಂಸದರು. ಸಕ್ರಿಯರಾಗಿದ್ದು, ಪಕ್ಷದ ವರಿಷ್ಠರಲ್ಲಿ ಒಳ್ಳೆಯ ಅಭಿಪ್ರಾಯಗಳಿವೆ. ಇವರ ತಂದೆ ಸಿ.ಎಂ.ಉದಾಸಿ ಜನತಾಪರಿವಾರದವರು ಎಂಬುದು ಪ್ರತಿಕೂಲ ಅಂಶ.

ಡಾ.ಸಿ.ಎನ್‌. ಅಶ್ವತ್ಥನಾರಾಯಣ

ಸಂಘ ಪರಿವಾರ ಹಿನ್ನೆಲೆಯ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಬಿಜೆಪಿ ಬಯಸುವ ಕಾರ್ಪೋರೇಟ್‌ ಶೈಲಿಯ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.