ADVERTISEMENT

ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ, 2028ರ ಚುನಾವಣೆಗೂ ನನ್ನದೇ ನಾಯಕತ್ವ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 0:20 IST
Last Updated 11 ಜುಲೈ 2025, 0:20 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ನವದೆಹಲಿ: ಕರ್ನಾಟಕದಲ್ಲಿ ನವೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಸ್ಪಷ್ಟವಾಗಿ ಅಲ್ಲಗಳೆದ ಸಿದ್ದರಾಮಯ್ಯ, ‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಕೆಲವರು ಹೇಳುತ್ತಿದ್ದಾರೆ. ಅವರಿಗೆ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಇಲ್ಲ’ ಎಂದು ಹೇಳಿದರು.  

ಕೇಂದ್ರ ಸಚಿವರು ಹಾಗೂ ಹೈಕಮಾಂಡ್‌ನ ನಾಯಕರನ್ನು ಭೇಟಿಯಾಗಲು ರಾಷ್ಟ್ರ ರಾಜಧಾನಿಗೆ ಬಂದಿರುವ ಸಿದ್ದರಾಮಯ್ಯ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ, ‘ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ’ ಎಂದು ಪುನರುಚ್ಚರಿಸಿದರು. 2023ರ ರೀತಿಯಲ್ಲಿ 2028ರ ಚುನಾವಣೆಯಲ್ಲೂ ನನ್ನದೇ ನಾಯಕತ್ವ ಎಂದು ಪ್ರಕಟಿಸಿದರು. 

ADVERTISEMENT

ನೀವು ಐದು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸುತ್ತೀರಾ ಅಥವಾ ವರ್ಷಾಂತ್ಯದ ಹೊತ್ತಿಗೆ ಬಹುಶಃ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುತ್ತೀರಾ? 

ನಾನು ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ. ಇದನ್ನು ಜುಲೈ 2ರಂದು ಸ್ಪಷ್ಟಪಡಿಸಿದ್ದೇನೆ. ಆಗ ಡಿ.ಕೆ. ಶಿವಕುಮಾರ್ ಅವರೂ ಇದ್ದರು. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲವೆಂದು ಖುದ್ದು ಶಿವಕುಮಾರ್ ಅವರೇ ಹೇಳಿದ್ದಾರೆ. 

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರಲ್ಲ? ಸರ್ಕಾರದ ನಾಯಕತ್ವ ಬದಲಾಗಬೇಕು ಎಂದು ಕೆಲವು ಶಾಸಕರು ಧ್ವನಿ ಎತ್ತಿದ್ದಾರಲ್ಲ? 

ಈ ಮಾತು ಸತ್ಯವಲ್ಲ. ನಾಯಕತ್ವ ಬದಲಾವಣೆ ಸಂಬಂಧ ಸುರ್ಜೇವಾಲಾ ಅವರು ಶಾಸಕರಿಗೆ ಯಾವುದೇ ಪ್ರಶ್ನೆ ಕೇಳಿಲ್ಲ. ಮುಖ್ಯಮಂತ್ರಿ ಬದಲಾವಣೆ ಸಂಬಂಧ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿಲ್ಲ ಎಂದು ಸುರ್ಜೇವಾಲಾ ಅವರೇ ಸ್ಪಷ್ಟಪಡಿಸಿದ್ದಾರೆ. ಅವರೇ ಅಲ್ಲಗಳೆದ ಮೇಲೆ, ಈ ವಿಷಯದಲ್ಲಿ ಊಹಾಪೋಹಗಳಿಗೆ ಆಸ್ಪದ ಇಲ್ಲ. ಈ ಊಹಾಪೋಹಗಳನ್ನು ಸೃಷ್ಟಿಸಿರುವುದು ಮಾಧ್ಯಮದವರೇ ಹೊರತು, ಕಾಂಗ್ರೆಸ್ ವಲಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯ ಚರ್ಚೆಯೇ ಆಗಿಲ್ಲ. 

ಕೆಲವು ಶಾಸಕರು ಈ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರಲ್ಲ? 

ಇದು ಯಾವಾಗಲೂ ಇರುತ್ತದೆ. ಡಿ.ಕೆ. ಶಿವಕುಮಾರ್ ಅವರಿಗೆ ಕೆಲವು ಶಾಸಕರ ಬೆಂಬಲ ಇದೆ. ಆಫ್‌ಕೋರ್ಸ್, ನಾಟ್‌ ಮಚ್‌. 

ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರವನ್ನು 2023ರಲ್ಲೇ ಹೆಣೆಯಲಾಗಿದೆ ಎಂಬ ಸುದ್ದಿ ಇದೆಯಲ್ಲ? 

ನಾವು ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದನ್ನು ಉಭಯ ನಾಯಕರು ಪಾಲಿಸಬೇಕು ಎಂದು ಹೈಕಮಾಂಡ್‌ನ ನಾಯಕರು 2023ರಲ್ಲೇ ಸೂಚನೆ ನೀಡಿದ್ದರು. ಹೈಕಮಾಂಡ್‌ ತೀರ್ಮಾನಕ್ಕೆ ತಲೆಬಾಗುವುದಾಗಿ ನಾವಿಬ್ಬರೂ ಹಲವು ಬಾರಿ ತಿಳಿಸಿದ್ದೇವೆ. ಸರ್ಕಾರಕ್ಕೆ ಎರಡೂವರೆ ವರ್ಷವಾಗುತ್ತಿರುವ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ವಿಷಯದ ಚರ್ಚೆಯಾಗುವುದು ಸಹಜ. ಆದರೆ, ಈ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ.

ಮುಖ್ಯಮಂತ್ರಿ ಬದಲಾವಣೆ ಬದಲಾವಣೆ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಲ್ಲ? 

ನಮ್ಮದು ಹೈಕಮಾಂಡ್‌ ಪಾರ್ಟಿ. ಹೈಕಮಾಂಡ್‌ ಯಾವುದೇ ತೀರ್ಮಾನ ಕೈಗೊಂಡರೂ ನಾನು ಪಾಲಿಸುತ್ತೇನೆ. ಶಿವಕುಮಾರ್ ಅವರೂ ಪಾಲಿಸಬೇಕು. 

ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಹೈಕಮಾಂಡ್‌ ಸುಳಿವು ನೀಡಿದೆಯಾ? ಖರ್ಗೆ ನಿಮಗೆ ಏನಾದರೂ ಹೇಳಿದ್ದಾರ? 

ಇಲ್ಲ. 

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಎರಡು ಬಣಗಳ ಕಚ್ಚಾಟ ತೀವ್ರವಾಗಿದೆಯಲ್ಲ? ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆಯಲ್ಲ? 

ಗ್ಯಾರಂಟಿ ಯೋಜನೆಗಳು ನಿಮ್ಮ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಅನುಷ್ಠಾನ ಆಗುತ್ತಿದೆ ಎಂದು ಸುರ್ಜೇವಾಲಾ ಅವರು ಶಾಸಕರನ್ನು ಕೇಳಿದ್ದಾರೆ. ಇದು ಅವರು ಕೇಳಿರುವ ಮುಖ್ಯ ಪ್ರಶ್ನೆ. ಯಾವ ಅಭಿವೃದ್ಧಿ ಕೆಲಸಗಳು ನಿಮ್ಮ ಕ್ಷೇತ್ರದಲ್ಲಿ ಆಗುತ್ತಿವೆ ಎಂದು ಕೇಳಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಸಂಬಂಧ ನಿಮ್ಮ ನಿರೀಕ್ಷೆಗಳೇನು ಎಂದು ಪ್ರಶ್ನಿಸಿದ್ದಾರೆ. ಶಾಸಕರು ವಿಶೇಷ ಅನುದಾನ ಕೇಳುತ್ತಿದ್ದಾರೆ ಅಷ್ಟೇ. 

ಕಾಂಗ್ರೆಸ್‌ನ ಕೆಲವು ಶಾಸಕರು ಅಧಿಕಾರ ಹಸ್ತಾಂತರ ಆಗಬೇಕೆಂದು ಹೇಳುತ್ತಿದ್ದಾರಲ್ಲ? 

ಕೆಲವು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆಯೇ ಹೊರತು, ಇದು ಪಕ್ಷದ ತೀರ್ಮಾನವಲ್ಲ. ಅಧಿಕಾರ ಹಸ್ತಾಂತರದ ಊಹೆಗೆ ಯಾವುದೇ ಅರ್ಥವಿಲ್ಲ. 

ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರು ಸುರ್ಜೇವಾಲಾ ಅವರಲ್ಲಿ ದೂರಿತ್ತಿದ್ದಾರೆ. ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡುವ ಪ್ರಸ್ತಾವ ಇದೆಯೇ? 

ಸದ್ಯ ಸಚಿವ ಸಂಪುಟ ಪುನರ್‌ ರಚನೆ ಆಗುವುದಿಲ್ಲ. 

ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಗಳಾಗುತ್ತಿದ್ದಾರೆ ಎಂದು ರಂಭಾಪುರ ಸ್ವಾಮೀಜಿ ಹೇಳಿಕೆ ನೀಡಿದ್ದಾರಲ್ಲ. 

ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮಾಜದ ಬಡವರ ಪರಿಸ್ಥಿತಿಯನ್ನು ಉತ್ತಮಪಡಿಸಿವೆ. ಯಾವ ಹಿನ್ನೆಲೆ ಅಥವಾ ಸಂದರ್ಭದಲ್ಲಿ ಸ್ವಾಮೀಜಿಗಳು ಈ ರೀತಿ ಹೇಳಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ, ಹೆಣ್ಣುಮಕ್ಕಳು ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಿದರೆ ಸೋಮಾರಿಗಳಾಗುತ್ತಾರೆಯೇ.

ಜೆಡಿಎಸ್‌ ಅಧಿಕಾರಕ್ಕೆ ಬರುವುದು ಹಗಲುಗನಸು: ಸಿಎಂ

ನಾವು ಅಧಿಕಾರಕ್ಕೆ ಬಂದರೆ ಮಾತ್ರ ಮೇಕೆದಾಟು ಯೋಜನೆ ಅನುಷ್ಠಾನವಾಗಲಿದೆ ಎಂಬ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಅಧಿಕಾರಕ್ಕೆ ಬಂದ ಕೂಡಲೆ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲಾಗುವುದು ಎಂದು ಲೋಕಸಭಾ ಚುನಾವಣೆಯ ವೇಳೆ ಹೇಳಿಕೆ ನೀಡಿದ್ದರು. ಅವರು ಏಕೆ ಯೋಜನೆ ಅನುಷ್ಠಾನ ಮಾಡಲಿಲ್ಲ. ಕರ್ನಾಟಕದಲ್ಲಿ ಅವರು ಅಧಿಕಾರಕ್ಕೆ ಬರುವುದಿಲ್ಲ. ನಾನು ಜೆಡಿಎಸ್‌ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 2004ರಲ್ಲಿ ಪಕ್ಷವು 59 ಸ್ಥಾನಗಳನ್ನು ಪಡೆದಿತ್ತು. ಅವರ ಶಕ್ತಿ ಚುನಾವಣೆಯಿಂದ ಚುನಾವಣೆಗೆ ಕುಂಠಿತವಾಗಿದೆಯೇ ಹೊರತು ಹೆಚ್ಚಾಗಿಲ್ಲ. 2023ರ ಚುನಾವಣೆಯಲ್ಲಿ ಅವರಿಗೆ ಸಿಕ್ಕಿದ್ದು 19 ಸ್ಥಾನಗಳಷ್ಟೇ. ಅವರು ಹಗಲುಗನಸು ಕಾಣುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯಲ್ಲಿ ಹಲವು ಸದಸ್ಯರು ಇದ್ದಾರೆ. ಸಿದ್ದರಾಮಯ್ಯ ಹಾಲಿ ಮುಖ್ಯಮಂತ್ರಿ ಆಗಿರುವ ಕಾರಣ ಅವರನ್ನೂ ಸೇರಿಸಿಕೊಂಡು ಜವಾಬ್ದಾರಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಗಬೇಕೆಂದು ಹಿತೈಶಿಗಳು ಹೇಳಬಹುದು. ಅದರಲ್ಲಿ ಯಾವುದೇ ತಪ್ಪು ಇಲ್ಲ. ಆದರೆ, ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸೆಪ್ಟೆಂಬರ್‌ ಕ್ರಾಂತಿ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಅವರನ್ನೇ ಕೇಳಿ.
ಕೆ.ಎಚ್‌.ಮುನಿಯಪ್ಪ, ಆಹಾರ ಸಚಿವ

ಸಿ.ಎಂ ಹೇಳಿದ್ದೇನು?

  • ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿ

  • ಶಾಸಕರ ಅಭಿಪ್ರಾಯ ಪಕ್ಷದ ಹೈಕಮಾಂಡ್‌ನ ತೀರ್ಮಾನವಲ್ಲ

  • ನಾವಿಬ್ಬರೂ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ

  • ಮುಖ್ಯಮಂತ್ರಿ ಬದಲಾವಣೆ ಮಾಧ್ಯಮಗಳ ಸೃಷ್ಟಿ, ಊಹಾಪೋಹಗಳಿಗೆ ಆಸ್ಪದವಿಲ್ಲ

  • ಡಿ.ಕೆ.ಶಿವಕುಮಾರ್ ಆಗಲಿ ಅಥವಾ ಶಾಸಕರು ಯಾರೇ ಆಗಲಿ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದರೆ ಅದರಲ್ಲಿ ತಪ್ಪೇನಿಲ್ಲ.

  • ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ರಾಜ್ಯದ ಜನರು ಸರ್ಕಾರದ ವಿರುದ್ಧ ಇಲ್ಲ. 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.