ADVERTISEMENT

‘ಸಂಪುಟ’ಕ್ಕಿಂತ ಸಚಿವ ದರ್ಜೆಯೇ ಭಾರ

ಮುಖ್ಯಮಂತ್ರಿ ಸೇರಿ ಸಚಿವರು 32 l 76 ಮಂದಿಗೆ ಸ್ಥಾನದ ‘ಮಾನ’ l ತಿಂಗಳಿಗೆ ತಲಾ ₹10 ಲಕ್ಷ ವೆಚ್ಚ

ಆರ್. ಮಂಜುನಾಥ್
Published 15 ಅಕ್ಟೋಬರ್ 2025, 23:49 IST
Last Updated 15 ಅಕ್ಟೋಬರ್ 2025, 23:49 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಅಧಿಕೃತವಾಗಿ 32 ಸಚಿವರಿದ್ದರೆ, ‘ಸಚಿವ ಸ್ಥಾನಮಾನ’ ಪಡೆದಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ಸ್ಥಾನದ ‘ಮಾನ’ ಪಡೆದಿರುವ ಪ್ರತಿಯೊಬ್ಬರಿಗೆ ತಿಂಗಳಿಗೆ ₹10 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಬೊಕ್ಕಸದಿಂದ ವ್ಯಯಿಸಲಾಗುತ್ತಿದೆ.

ಮುಖ್ಯಮಂತ್ರಿಯವರ ಕಾನೂನು, ರಾಜಕೀಯ, ವೈದ್ಯಕೀಯ, ಆರ್ಥಿಕ, ಮಾಧ್ಯಮ ಸಲಹೆಗಾರರು ಸೇರಿದಂತೆ ನಿಗಮ ಮಂಡಳಿಗಳ ಅಧ್ಯಕ್ಷರು–ಉಪಾಧ್ಯಕ್ಷರು ಸೇರಿದಂತೆ ಒಟ್ಟು 76 ಮಂದಿಗೆ ‘ಸಚಿವರ ಸ್ಥಾನಮಾನ’ದ ‘ಗ್ಯಾರಂಟಿ’ಯನ್ನು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ದಯಪಾಲಿಸಿದೆ.

ADVERTISEMENT

2023ರಲ್ಲಿ ವಿಧಾನಸಭೆ–ವಿಧಾನ ಪರಿಷತ್‌ನ ಮುಖ್ಯ ಸಚೇತಕರಿಗೆ ಸಂಪುಟ ಸಚಿವ ದರ್ಜೆ ಸ್ಥಾನ ನೀಡುವ ಪ್ರಕ್ರಿಯೆ ಆರಂಭವಾಯಿತು. ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್‌. ಪಾಟೀಲ ಅವರಿಗೆ ‘ರಾಜ್ಯ ಸಚಿವರ ಸ್ಥಾನಮಾನ’ವನ್ನು ಇದೇ 14ರಂದು ಕಲ್ಪಿಸಲಾಗಿದೆ. ಅಲ್ಲಿಗೆ, ಸದ್ಯ ‘ಸಚಿವ ಸ್ಥಾನಮಾನ’ ದಕ್ಕಿಸಿಕೊಂಡವರ ಸಂಖ್ಯೆ 76ಕ್ಕೇರಿದೆ.

ಎಲ್ಲರನ್ನೂ ತೃಪ್ತಿಪಡಿಸಲು ಹಿಂದೆಲ್ಲ ಸಚಿವರ ಸಂಖ್ಯೆಯನ್ನು ಬೇಕಾಬಿಟ್ಟಿ ಏರಿಸುತ್ತಿದ್ದುದರಿಂದ ‘ಜಂಬೋ’ ಸಚಿವ ಸಂಪುಟದ ಭಾರ ಸರ್ಕಾರವನ್ನು ಬಾಧಿಸುತ್ತಿತ್ತು. ಶಾಸನಸಭೆಯ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ ಒಟ್ಟು 34 ಮಂದಿಗೆ ಅವಕಾಶ ಕಲ್ಪಿಸಬಹುದು ಎಂಬ ನಿಯಮ ತರಲಾಯಿತು. ಸಂಪುಟ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಅನ್ಯಮಾರ್ಗದಲ್ಲಿ ಅಧಿಕಾರ ನೀಡುವ ದಾರಿಯನ್ನು ಸರ್ಕಾರ ನಡೆಸುವವರು ಹಿಡಿದರು. ಇದು, ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾತ್ರವಲ್ಲ; ಹಿಂದೆ ಆಡಳಿತ ನಡೆಸಿದ ಬಿಜೆಪಿ, ಜೆಡಿಎಸ್‌ ನೇತೃತ್ವದ ಸರ್ಕಾರಗಳಲ್ಲೂ ಈ ಪದ್ಧತಿ ಚಾಲ್ತಿಯಲ್ಲಿತ್ತು.  

ಮುಖ್ಯಮಂತ್ರಿ, ಸಚಿವರು, ರಾಜ್ಯ ಸಚಿವರು, ವಿಧಾನಸಭೆ ಸ್ಪೀಕರ್‌, ವಿಧಾನ ಪರಿಷತ್‌ ಸಭಾಪತಿ, ಮುಖ್ಯ ಸಚೇತಕರು, ಶಾಸಕರು, ವಿಧಾನಪರಿಷತ್‌ ಸದಸ್ಯರಿಗೆ ವೇತನ ಏಪ್ರಿಲ್‌ನಿಂದ ದುಪ್ಪಟ್ಟಾಗಿದೆ. ವಿಧಾನಮಂಡಲದಲ್ಲಿ ‌ಚರ್ಚೆ ಇಲ್ಲದೆಯೇ ಈ ಮಸೂದೆಗಳು ಅಂಗೀಕಾರವಾಗಿ, ಜಾರಿಯಾಗಿವೆ. 

ರಾಜ್ಯ ಸಚಿವ ಸ್ಥಾನಮಾನ ಪಡೆದವರಿಗೆ ಸಂಪುಟ ಸಚಿವ ಸ್ಥಾನಮಾನಕ್ಕಿಂತ ವೇತನ, ಮನೆ ಬಾಡಿಗೆ, ಇಂಧನ, ವಾರ್ಷಿಕ ಅತಿಥಿ ಭತ್ಯೆಯಲ್ಲಿ ಅಲ್ಪ ಕಡಿಮೆ ಇರುವುದು ಬಿಟ್ಟರೆ, ಉಳಿದ ಸೌಲಭ್ಯಗಳಲ್ಲಿ ವ್ಯತ್ಯಾಸವಿಲ್ಲ.

ವೇತನ, ಮನೆ ಬಾಡಿಗೆಗೆ ಲಕ್ಷಾಂತರ ರೂಪಾಯಿ ತಿಂಗಳಿಗೆ ವೆಚ್ಚಾಗುವ ಜೊತೆಗೆ, 12 ಸಿಬ್ಬಂದಿಯನ್ನೂ ‘ಸಚಿವ ಸ್ಥಾನಮಾನ’ ಹೊಂದಿರುವವರು ಪಡೆಯುತ್ತಾರೆ. ಸರಾಸರಿ ₹30 ಸಾವಿರ ವೇತನವಾದರೆ, ಈ ಬಾಬ್ತಿನಲ್ಲೇ ₹3.6 ಲಕ್ಷ ವೆಚ್ಚವಾಗುತ್ತದೆ.

ಬಿಜೆಪಿ ಅವಧಿಯಲ್ಲಿ 72

ನಿಗಮ–ಮಂಡಳಿ, ಸಲಹೆಗಾರರಿಗೆ ‘ಸಚಿವ ಸ್ಥಾನಮಾನ’ ನೀಡುವ ಪ್ರಕ್ರಿಯೆ ಬಿಜೆಪಿ ಸರ್ಕಾರದಲ್ಲೂ ಇತ್ತು. ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ, 72 ಮಂದಿಗೆ ‘ಸಚಿವ ಸ್ಥಾನಮಾನ’ ನೀಡಲಾಗಿತ್ತು. ಈಗ, ಕಾಂಗ್ರೆಸ್‌ ಸರ್ಕಾರದಲ್ಲಿ ಆ ಸಂಖ್ಯೆ(76) ಮೀರಿ ದಾಖಲೆ ನಿರ್ಮಾಣವಾಗಿದೆ.

ಉಲ್ಲಂಘನೆ: ‘ಸಂವಿಧಾನದ ವಿಧಿ 164(1ಎ) ಅನ್ನು ಉಲ್ಲಂಘಿಸಿ, ಬೇಕಾದವರಿಗೆಲ್ಲ ಸಚಿವ ಸ್ಥಾನಮಾನವನ್ನು ನೀಡಲಾಗಿದೆ. ಸಂವಿಧಾನ ಹಾಗೂ ಕಾನೂನುಗಳ ಉಲ್ಲಂಘನೆ ಮಾಡಿ, ಸರ್ಕಾರಕ್ಕೆ ಅತಿಹೆಚ್ಚು ಆರ್ಥಿಕ ಹೊರೆಯನ್ನೂ ಸೃಷ್ಟಿಸಲಾಗಿದೆ. ಇದನ್ನು ಪ್ರಶ್ನಿಸಿ, ಈ ಸ್ಥಾನಮಾನವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸ
ಲಾಗಿದೆ’ ಎಂದು ಅರ್ಜಿದಾರ ಸೂರಿ ಪಾಯಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.