ADVERTISEMENT

'ಸಂಚಾರಿ ಕೋವಿಡ್-19 ಟೆಸ್ಟಿಂಗ್ ಕಿಯೋಸ್ಕ್'ಗೆ ಮುಖ್ಯಮಂತ್ರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 10:55 IST
Last Updated 16 ಏಪ್ರಿಲ್ 2020, 10:55 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಸಂಚಾರಿ ಕೋವಿಡ್19 ಕಿಯೋಸ್ಕ್ ಉದ್ಘಾಟಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಸಂಚಾರಿ ಕೋವಿಡ್19 ಕಿಯೋಸ್ಕ್ ಉದ್ಘಾಟಿಸಿದರು.   

ಬೆಂಗಳೂರು: ನಗರದಸ್ಟಾರ್ಟ್ ಅಪ್ ಆಗಿರುವ ಮಂತ್ರ-ಇ ವೆಂಚರ್ಸ್ ಸಂಸ್ಥೆಯು ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿರುವ, 2 'ಸಂಚಾರಿ ಕೋವಿಡ್-19 ಟೆಸ್ಟಿಂಗ್ ಕಿಯೋಸ್ಕ್' ಗೆ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಚಾಲನೆ ನೀಡಿದರು.

"ಈ ಕಿಯೋಸ್ಕ್ಗಳಿಂದ ಕೋವಿಡ್-19 ಸೋಂಕಿನ ಪರೀಕ್ಷೆ ಹಾಗೂ ಮಾದರಿಗಳನ್ನು ಸಮುದಾಯ, ಕ್ಲಸ್ಟರ್ ಗಳಲ್ಲಿ ಸಂಗ್ರಹಿಸಿ, ಮುಂದಿನ ಹಂತದ ತಪಾಸಣೆಗೆ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲು ಅನುಕೂಲವಾಗಲಿದೆ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಈ ಕಿಯೋಸ್ಕ್ ಅನ್ನು ಮಂತ್ರ ಇ-ವೆಂಚರ್ಸ್‌‌ನಮನೋಜ್ ಕುಡ್ತಾರ್ಕರ್ ರವರು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ್ದು,
ಕರ್ನಾಟಕ ಸರ್ಕಾರದ ಕೋವಿಡ್-19 ಸಲಹಾ ಮಂಡಳಿಯ ಸದಸ್ಯರಾಗಿರುವ ಹಾಗೂ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್‌‌ನ ರೀಜನಲ್ ಡೈರೆಕ್ಟರ್ಡಾ. ವಿಶಾಲ್ ರಾವ್ ಉಸ್ತುವಾರಿಯಲ್ಲಿ ಈ ಯೋಜನೆಯು ರೂಪುಗೊಂಡಿದೆ.

ADVERTISEMENT

ಕೆ.ಎಲ್.ಇ ಸಂಸ್ಥೆಯ ತಜ್ಞ ವೈದ್ಯರೂ ಸಹ ಕಿಯೋಸ್ಕ್ ಅಭಿವೃದ್ಧಿಗೆ ತಾಂತ್ರಿಕ ಸಲಹೆ, ಸೂಚನೆಗಳನ್ನು ನೀಡಿದ್ದು, ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ (RGUHS), ತನ್ನ ಅಧೀನದಲ್ಲಿರುವ ಕಾಲೇಜುಗಳು ಮತ್ತು ಆಸ್ಪತ್ರೆಗಳ ಜಾಲದ ಮೂಲಕ ಕೋವಿಡ್-19 ಸೋಂಕಿನ ಮಾದರಿಗಳನ್ನು ಪರೀಕ್ಷಿಸಲು, ಸಂಗ್ರಹಿಸಲು ಈ ಕಾರ್ಯದಲ್ಲಿ ನಮ್ಮೊಂದಿಗೆ ಸಹಕರಿಸಲಿದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕಿಯೋಸ್ಕ್ ಟೆಲಿಫೋನ್ ಬೂತ್ ಮಾದರಿಯಲ್ಲಿದ್ದು, 6.5 ಅಡಿ ಎತ್ತರ, 3 ಅಡಿ ಅಗಲ ಹೊಂದಿರುತ್ತದೆ. ಈ ಕಿಯೋಸ್ಕ್ ಅಲ್ಯೂಮಿನಿಯಂ ಮತ್ತು ಅಕ್ರಿಲಿಕ್ ಗ್ಲಾಸ್ ಮೂಲಕ ತಯಾರಾಗಿದ್ದು, ಹೊರ ಮೈ ಸಂಪೂರ್ಣ ಕರೋನಾ ನಿರೋಧಕವಾಗಿರುತ್ತದೆ. ಈ ಕಿಯೋಸ್ಕ್ ಮಿನಿ ಟ್ರಕ್, ಪಿಕ್ ಅಪ್ ವಾಹನದಲ್ಲಿಯೂ ಸಹಜವಾಗಿ ಸಾಗಿಸಬಲ್ಲ ಸೌಲಭ್ಯ ಹೊಂದಿದ್ದು, ಕ್ಲಸ್ಟರ್ ಅಥವಾ ಹೊರಾಂಗಣ, ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಇಡಬಹುದು. ಬೂತ್ ಸಹಾಯಕರು,ಆರೋಗ್ಯ ಸೇವಾ ಕಾರ್ಯಕರ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೈ ಗವಸು, ಮತ್ತು ಸೋಂಕಿತರ ಕೋವಿಡ್-19 ಮಾದರಿಗಳನ್ನು ಸಂಗ್ರಹಿಸಲು ಮೆಡಿಕಲ್ ಕಿಟ್ ಅನ್ನು ಸಹ ಇದು ಹೊಂದಿರಲಿದೆ. ಆರೋಗ್ಯ ಸಹಾಯಕರು ಪಿಪಿಇ(ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ಮೆಂಟ್) ಬಳಸಿಕೊಳ್ಳಲು ಸಹಕಾರಿಯಾಗಲಿದೆ.

ಸಂಸದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ, ಬೆಂಗಳೂರು ದಕ್ಷಿಣ ಸಂಸದರ ಕಚೇರಿಯ ಉಸ್ತುವಾರಿಯಲ್ಲಿ ಈ ಕಿಯೋಸ್ಕ್‌‌ಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದ ಪಿಪಿಇಗಳಿಗೆ ವ್ಯಯವಾಗುವ ಶೇ 95 ರಷ್ಟು ಖರ್ಚು ಉಳಿತಾಯವಾಗಲಿದ್ದು, ಉಪಯೋಗಿಸಿದ ನಂತರ ಬಿಸಾಡುವ ಪಿಪಿಇ ಗಳಿಂದ ಉಂಟಾಗುತ್ತಿದ್ದ ಮಾಲಿನ್ಯ ತಡೆಗಟ್ಟಲು ಸಹ ಇದರಿಂದ ಸಹಕಾರಿಯಾಗಲಿದೆ. ಕಿಯೋಸ್ಕ್‌ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ವೈದ್ಯಕಿಯ ಸಿಬ್ಬಂದಿ ಮತ್ತು ಸಾಮಾನ್ಯ ನಾಗರಿಕರು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಬಹುದುಎಂದು ಮಂತ್ರ ಇ- ವೆಂಚರ್ಸ್ ನ ಶ್ರೀ ಮನೋಜ್ ರವರು ತಿಳಿಸಿದರು.

ಕಾರ್ಯ ವಿಧಾನ : ಸಂಚಾರಿ ಕಿಯೋಸ್ಕ್ ಬೂತ್‌ನ ಬಳಿ ಸಾಮಾನ್ಯ ನಾಗರಿಕರು ತೆರಳಿ, ಅಲ್ಲಿರುವ ಗ್ಲಾಸ್ ಹೊರಮೈ ಮುಂದೆ ನಿಂತುಕೊಳ್ಳಬೇಕು. ಆರೋಗ್ಯ ಸಹಾಯಕರು ಕೋವಿಡ್-19 ಸಂಬಂಧಿಸಿದ ಕೆಲವೊಂದು ಮಾದರಿ(ಸ್ಯಾಂಪಲ್)ಗಳನ್ನು ಸಂಗ್ರಹಿಸುತ್ತಾರೆ. ಮುಂದಿನ ಮಾದರಿಯನ್ನು ಸಂಗ್ರಹಿಸುವ ಮುಂಚೆ ಕೆಲವೊಂದು ಸೂಕ್ತ ಸ್ಯಾನಿಟೈಜೇಶನ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಾರೆ. ಬೂತ್ ಬಳಿ ಹೋಗಿ ಪ್ರಕ್ರಿಯೆ ಮುಗಿಸಿಕೊಂಡು ಹೊರಗಡೆ ಬರುವ ತನಕವೂ ಕೆಲವೊಂದು ಅಗತ್ಯ ಸೂಚನೆಗಳನ್ನು ನೀಡಲಾಗುತ್ತದೆ.

ಈ ಸಂಪೂರ್ಣ ಪ್ರಕ್ರಿಯೆಯು ಕೇವಲ 5 ನಿಮಿಷಗಳದ್ದಾಗಿದ್ದು, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕಾರ್ಯ ನಿರ್ವಹಿಸಲಾಗುತ್ತದೆ. ನಂತರ ಸೋಂಕಿನ ಮಾದರಿಗಳನ್ನು ಸಂಗ್ರಹಿಸಿ ಹತ್ತಿರದ ಪ್ರಯೋಗಾಲಯಕ್ಕೆ ಮುಂದಿನ ಹಂತದ ಪರೀಕ್ಷೆಗೆ ಕಳುಹಿಸಲಾಗುವುದು.

ಕಿಯೋಸ್ಕ್ ನ ಪ್ರಯೋಜನಗಳು:ಈ ಸೌಲಭ್ಯವನ್ನು ಬಳಸಲು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ಮಾರ್ಗದರ್ಶಿ ನಿಯಮಗಳ ಅನ್ವಯ ಕಾರ್ಯನಿರ್ವಹಿಸುವುದು.ಕೋವಿಡ್ ಸೋಂಕಿನ ಮಾದರಿಗಳನ್ನು ಪರೀಕ್ಷಿಸಲು,ಸಂಗ್ರಹಿಸಲು ಬೂತ್ ನಲ್ಲಿ ಕೇವಲ ಒಬ್ಬರು ಆರೋಗ್ಯ ಸಹಾಯಕರ ಅಗತ್ಯತೆ ಮಾತ್ರ ಇದ್ದು, ಮಾದರಿಗಳನ್ನು ಮುಂದಿನ ಹಂತಕ್ಕೆ ಸಾಗಿಸಲು ಕೆಲವೇ ಸಹಾಯಕರು ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ರೂಪಿಸಲಾಗಿರುತ್ತದೆ. ಕೋವಿಡ್-19 ಸೋಂಕಿನ ಕುರಿತು ಯಾರಿಗಾದರೂ ಸಂದೇಹವಿದ್ದಲ್ಲಿ ಫೀವರ್ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಭೇಟಿ ನೀಡುವ ಬದಲು ಈ ಸಂಚಾರಿ ಕಿಯೋಸ್ಕ್ ಗೆ ಭೇಟಿ ನೀಡಿದಲ್ಲಿ ಅನಗತ್ಯವಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಲಿದೆ.

ಒಂದು ಕಿಯೋಸ್ಕ್ ಅನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ದಲ್ಲಿ, ಮತ್ತೊಂದು ಕಿಯೋಸ್ಕ್ ಅನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಬೆಂಗಳೂರು ದಕ್ಷಿಣ ಸಂಸದರ ಕಚೇರಿಯು, ಕ್ಷೇತ್ರ ವ್ಯಾಪ್ತಿಯಲ್ಲಿ 5 ಕರೋನಾ ಹಾಟ್ ಸ್ಪಾಟ್‌ಗಳನ್ನು ಗುರುತಿಸಿದ್ದು, ಸುಧಾಮನಗರ, ಕರಿಸಂದ್ರ, ಜೆಪಿ ನಗರ, ಬಾಪೂಜಿನಗರ ಮತ್ತು ಮಡಿವಾಳ ವಾರ್ಡ್ಗಳಲ್ಲಿ ಕಿಯೋಸ್ಕ್ ಅನ್ನು ಇರಿಸುವ ಯೋಜನೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.