ADVERTISEMENT

ಇಟ್ಟಿಗೆ ಗೂಡಲ್ಲಿ ಸುಡುತ್ತಿದೆ ಕಲಿಕೆಯ ವಯಸ್ಸು!

ಇಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ

ಎಂ.ಸಿ.ಮಂಜುನಾಥ
Published 11 ಜೂನ್ 2019, 19:41 IST
Last Updated 11 ಜೂನ್ 2019, 19:41 IST
   

ಹಾವೇರಿ: ಜೂನ್ ತಿಂಗಳು ಬಂತೆಂದರೆ ಶಾಲೆಗೆ ಹೋಗುವ ಮಕ್ಕಳಿಗೆ ಎಲ್ಲಿಲ್ಲದ ಸಡಗರ. ಹೊಸ ಬ್ಯಾಗ್, ಪುಸ್ತಕ, ಬಟ್ಟೆಯೊಂದಿಗೆ ತರಗತಿಗಳತ್ತ ಹೆಜ್ಜೆ ಹಾಕುತ್ತಾರೆ. ಆದರೆ, ತುತ್ತು ಕೂಳಿಗಾಗಿ ಹೆತ್ತವರೊಂದಿಗೆ ಕೂಲಿಗೆ ಹೋಗುವ ಮತ್ತೊಂದು ವರ್ಗದ ಮಕ್ಕಳೂ ರಾಜ್ಯದಲ್ಲಿದ್ದಾರೆ. ಪೊಲೀಸರು ಹಾಗೂ ಸ್ವಯಂ ಸೇವಾ ಸಂಸ್ಥೆಯಾದ ಇಂಟರ್‌ನ್ಯಾಷನಲ್‌ ಜಸ್ಟಿಸ್‌ ಮಿಷನ್‌ (ಐಜೆಎಂ) ಸದಸ್ಯರು ಅಂತಹ 480 ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ.

ಕಟ್ಟಡ ನಿರ್ಮಾಣ, ಕಲ್ಲು ಕ್ವಾರಿ,ಇಟ್ಟಿಗೆಗೂಡು, ಬ್ಯಾಗ್ ತಯಾರಿಕಾ ಕಾರ್ಖಾನೆಗಳು, ಅಂಗಡಿ, ಬೇಕರಿ, ಗ್ಯಾರೇಜ್‌, ಹೋಟೆಲ್, ಶ್ರೀಮಂತರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ 18 ವರ್ಷದ ಒಳಗಿನ‌ ಮಕ್ಕಳನ್ನು ಜಂಟಿಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾವೇರಿ, ವಿಜಯಪುರ ಯಾದಗಿರಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಮಕ್ಕಳು ಬಂಧಮುಕ್ತರಾಗಿದ್ದಾರೆ.

ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಹಾಗೂ ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 12 ಅನ್ನು ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಇದರ ಭಾಗವಾಗಿ ಐಜೆಎಂ ತನ್ನ ಕಾರ್ಯಾಚರಣೆಯ ವರದಿಯನ್ನು ಬಿಡುಗಡೆ ಮಾಡಿದೆ.

ADVERTISEMENT

ವಯಸ್ಸುವಾರು ವಿವರ: ಐಜೆಎಂ ರಕ್ಷಿಸಿರುವ ಕಾರ್ಮಿಕರಲ್ಲಿ 6 ರಿಂದ 10 ವರ್ಷ ವಯೋಮಾನದ 144 ಮಕ್ಕಳಿದ್ದರೆ, 11 ರಿಂದ 17ರ ವಯೋಮಾನದ 201 ಬಾಲಕರು ಇದ್ದಾರೆ. ಇನ್ನುಳಿದವರೆಲ್ಲ ಐದು ವರ್ಷದ ಒಳಗಿನವರು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಐಜೆಎಂ ಸದಸ್ಯ ಜೋಸೆಫ್, ‘ರಕ್ಷಿಸಿದವರಲ್ಲಿ ಇಟ್ಟಿಗೆಗೂಡುಗಳಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳೇಹೆಚ್ಚು. ವಾರಕ್ಕೆ ₹1,500 ಕೂಲಿ ಕೊಡುವುದಾಗಿ ನಂಬಿಸಿ ಒಡಿಶಾ ಹಾಗೂ ಬಿಹಾರ ರಾಜ್ಯಗಳಿಂದ ಕೂಲಿಗಳನ್ನು ಕರೆತರುವ ಏಜೆಂಟ್‌ಗಳು, ಆನಂತರ ಅವರ ಮಕ್ಕಳನ್ನೂ ದುಡಿಮೆಗೆ ಬಳಸಿಕೊಳ್ಳುತ್ತಿದ್ದಾರೆ.ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಜತೆಗೆ ಶಾಲೆಗೆ ಹೋಗ­ಬೇಕಾದ ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟಿರುವುದು ಶಿಕ್ಷಣ ಹಕ್ಕು ಕಾಯ್ದೆಯನ್ನೂ ಉಲ್ಲಂಘಿಸಿದಂತಾಗುತ್ತದೆ.ಹೀಗಾಗಿ, ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡುತ್ತಿದ್ದೇವೆ’ ಎಂದುಹೇಳಿದರು.

496 ಕಡೆ ದಾಳಿ

‘ಹಾವೇರಿ ಜಿಲ್ಲೆಯಲ್ಲಿ2017-18ರ ಅವಧಿಯಲ್ಲಿ 496 ಕಡೆ ದಾಳಿ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ’ ಎಂದು ‌ಜಿಲ್ಲಾಬಾಲಕಾರ್ಮಿಕ ಯೋಜನಾ ಸಂಸ್ಥೆಯ ನಿರ್ದೇಶಕ ಪ್ರಸನ್ನ ಕುಮಾರ್ ಮಾಹಿತಿ ನೀಡಿದರು.

ಶಿಕ್ಷೆ ಪ‍್ರಮಾಣ ಕಡಿಮೆ

ಕೇಂದ್ರ ಕಾರ್ಮಿಕ ಸಚಿವಾಲಯದ ಇತ್ತೀಚಿನ ಅಂಕಿ ಅಂಶದ ಪ್ರಕಾರ 2018ರಲ್ಲಿ ದೇಶದಲ್ಲಿ 679 ಪ್ರಕರಣಗಳು ದಾಖಲಾಗಿವೆ. ಆ ಪೈಕಿ 84 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, 15ಕ್ಕೆ ಶಿಕ್ಷೆ ಆಗಿದೆ. 2017ರಲ್ಲಿ ದಾಖಲಾದ 681‍ಪ್ರಕರಣಗಳ ಪೈಕಿ ಶಿಕ್ಷೆಯಾಗಿರುವುದು 53ಕ್ಕೆ ಮಾತ್ರ. ರಾಜ್ಯದಲ್ಲೂ ಶಿಕ್ಷೆಯ ಪ್ರಮಾಣ ಕೇವಲ ಶೇ 2ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.