ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ
ಬೆಂಗಳೂರು: ‘ಯಾರೇ ಆಗಲಿ ಕಾನೂನಿಗೆ ವಿರುದ್ಧವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸುವ ಮತ್ತು ಅದಕ್ಕೆ ಕುಮ್ಮಕ್ಕು ಕೊಡುವ ಪೋಷಕರ ನಡೆ ಆತಂಕಕಾರಿ’ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಕುರಿತಂತೆ ನ್ಯಾಯಾಂಗ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಶಾಶ್ವತ ವಿಳಾಸ ಹೊಂದಿರುವ ಆರೋಪಿ ಹಬೀಬರ್ ಅಲಿಯಾಸ್ ಹಬೀಬ್ ಸಲ್ಲಿಸಿದ್ದ (28) ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಈಗಾಗಲೇ ಮದುವೆಯಾಗಿದ್ದಾರೆ. ಮದುವೆಯಾದಾಗ ಸಂತ್ರಸ್ತೆ ವಯಸ್ಸು 17 ವರ್ಷ 10 ತಿಂಗಳಾಗಿತ್ತು. ದೂರುದಾರಳೂ ಆದ ಪತ್ನಿ ಈಗ ಗರ್ಭಿಣಿ ಇದ್ದಾಳೆ. ಅಂತಿಮವಾಗಿ ಪರಸ್ಪರ ಒಪ್ಪಂದದ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಆಕೆ ಇಚ್ಛಿಸಿದ್ದು ಯುವಕನನ್ನು ಪೋಕ್ಸೊದಿಂದ ಮುಕ್ತಿಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಪ್ರಕರಣದಲ್ಲಿ ಸೆಟಲ್‌ಮೆಂಟ್ ಮಾಡಿಕೊಳ್ಳುತ್ತೇವೆ ಎಂಬ ಅರ್ಜಿದಾರರ ವಾದ ಒಪ್ಪತಕ್ಕದ್ದಲ್ಲ. ಈ ಪ್ರಕರಣದಲ್ಲಿ ಪೋಷಕರೇ ಮುಂದಾಗಿ ಮದುವೆ ಮಾಡಿಸಿದ್ದು, ಅವರ ವಿರುದ್ಧದ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಕಲಂ 9, 10 ಮತ್ತು 11 ರ ಅಡಿಯಲ್ಲಿ ಕಠಿಣ ಕ್ರಮಕ್ಕೆ ಆದೇಶಿಸಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇಂತಹ ಪ್ರಕರಣಗಳಲ್ಲಿ ಸಲುಗೆ ತೋರುವುದು ತರವಲ್ಲ. ಈ ರೀತಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸಿದರೆ ಅಸ್ತಿತ್ವದಲ್ಲಿರುವ ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ಬೆಲೆಯೇನು’ ಎಂದು ಪ್ರಶ್ನಿಸಿ, ‘ಈ ಕುರಿತಂತೆ ವಿಶದವಾದ ತೀರ್ಪು ಪ್ರಕಟಿಸಲಾಗುವುದು’ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಸಂತ್ರಸ್ತೆಯೇ ಸೆಟಲ್‌ಮೆಂಟ್ ಮಾಡಿಕೊಳ್ಳುತ್ತೇವೆ ಎಂದು ಹೇಳುವುದು ಎಷ್ಟು ಸರಿ? ಈ ರೀತಿಯ ಪ್ರಕರಣಗಳಲ್ಲಿ ಪೋಷಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಆಡಳಿತಾಂಗ ಯಾವುದೇ ರಿಯಾಯತಿ ತೋರಬಾರದು.– ನ್ಯಾ.ಎಂ.ನಾಗಪ್ರಸನ್ನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.