ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರ್ಘಟನೆ |SOP: ನಿಲುವು ತಿಳಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 22:30 IST
Last Updated 20 ಫೆಬ್ರುವರಿ 2026, 22:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ಪ್ರಮುಖ ಅಂಶಗಳನ್ನು ಕರ್ನಾಟಕ ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಸೇರ್ಪಡೆ ಮಾಡುವ ಸಲಹೆ ಕುರಿತಂತೆ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಕರಣದ ಅಮಿಕಸ್‌ ಕ್ಯೂರಿಯಾಗಿರುವ ಪದಾಂಕಿತ ಹಿರಿಯ ವಕೀಲೆ ಎಸ್‌. ಸುಶೀಲಾ, ‘ಸರ್ಕಾರ 2025ರ ಸೆಪ್ಟೆಂಬರ್ 1ರಂದು ಎಸ್‌ಒಪಿ ರೂಪಿಸಿದೆ. ಈ ನಿಟ್ಟಿನಲ್ಲಿ ಸಲಹೆ ನೀಡುವಂತೆ ನಮಗೆ ಕೋರಲಾಗಿತ್ತು. ನಾವು ನಮ್ಮ ಸಲಹೆಗಳನ್ನು ನೀಡಿದ್ದೇವೆ. ಅವುಗಳನ್ನು ಅಡಕಗೊಳಿಸಿ ಸರ್ಕಾರ ಕಳೆದ ತಿಂಗಳ 13ರಂದು ಪರಿಷ್ಕೃತ ಎಸ್‌ಒಪಿ ರೂಪಿಸಿದೆ. ಏತನ್ಮಧ್ಯೆ, 2025ರ ಆಗಸ್ಟ್‌ 20ರಂದು ಜನಸಂದಣಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಸೂದೆಯೊಂದನ್ನು ರೂಪಿಸಿದೆ. ಇದು ಸದನ ಸಮಿತಿಯ ಪರಿಗಣನೆಯಲ್ಲಿದೆ. ಮಸೂದೆಗೆ ಹೋಲಿಕೆ ಮಾಡಿದರೆ ಎಸ್‌ಒಪಿ ಅತ್ಯಂತ ಪರಿಣಾಮಕಾರಿಯಾಗಿದೆ. ಹಾಗಾಗಿ, ಇದರಲ್ಲಿನ ಅಂಶಗಳನ್ನು ಅಲ್ಲಿ ಅಡಕಗೊಳಿಸಿದರೆ ಒಳ್ಳೆಯದು. ಅಂತೆಯೇ, ಆರ್‌ಸಿಬಿ ತನ್ನ ಮುಂದಿನ ಐಪಿಎಲ್‌ ಟೂರ್ನಿ ಪಂದ್ಯಗಳನ್ನು ಇದೇ ಕ್ರೀಡಾಂಗಣದಲ್ಲಿ ನಡೆಸಲು ಬಯಸಿದೆ ಎನ್ನಲಾಗಿದೆ. ಅದಕ್ಕೂ ಮುನ್ನ ಎಸ್‌ಒಪಿ ಜಾರಿಗೊಳಿಸಲು ನಿರ್ದೇಶಿಸಬೇಕು’ ಎಂದು ಕೋರಿದರು. ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಗಿದೆ.

ADVERTISEMENT

ವಜಾ: ‘ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ. ಇದನ್ನು ಸರಿಪಡಿಸುವ ಸಂಬಂಧ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು ಪರಿಗಣಿಸಬೇಕು’ ಎಂದು ಕೋರಿ ವಕೀಲ ರಮೇಶ್‌ ನಾಯ್ಕ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಪೀಠ ಇದೇ ವೇಳೆ ವಜಾಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.