ADVERTISEMENT

ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 20:05 IST
Last Updated 17 ಡಿಸೆಂಬರ್ 2020, 20:05 IST
ಲಕ್ಷ್ಮಿ
ಲಕ್ಷ್ಮಿ   

ಬೆಂಗಳೂರು: ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮಿ (33) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೋಣನಕುಂಟೆ ನಿವಾಸಿ ಆಗಿದ್ದ ಲಕ್ಷ್ಮಿ, ಮೂರು ದಿನಗಳ ಹಿಂದಷ್ಟೇ ನಾಗರಬಾವಿಯಲ್ಲಿರುವ ಸ್ನೇಹಿತೆಯೊಬ್ಬರ ಮನೆಗೆ ಬಂದಿದ್ದರು. ಅದೇ ಮನೆಯ ಕೊಠಡಿಯಲ್ಲಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘2014ನೇ ಬ್ಯಾಚ್‌ ಅಧಿಕಾರಿಯಾಗಿದ್ದ ಲಕ್ಷ್ಮಿ, 2017ರಿಂದ ಸಿಐಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೈದರಾಬಾದ್‌ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನವೀನ್ ಎಂಬುವರನ್ನು ಪ್ರೀತಿಸಿ 2012ರಲ್ಲಿ ಮದುವೆಯಾಗಿದ್ದರು. ಆದರೆ, ಎರಡು ವರ್ಷಗಳಿಂದ ದಂಪತಿ ನಡುವೆ ಜಗಳ ಶುರುವಾಗಿತ್ತು. ಅದೇ ಕಾರಣಕ್ಕೆ ಲಕ್ಷ್ಮಿ ಅವರು ನೊಂದಿದ್ದರೆಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ’ ಎಂದೂ ಅಧಿಕಾರಿ ವಿವರಿಸಿದರು.

ADVERTISEMENT

‘ಸ್ನೇಹಿತೆ ಹಾಗೂ ಸಂಬಂಧಿಕರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಠಡಿಯಲ್ಲಿ ಯಾವುದೇ ಮರಣ ಪತ್ರವೂ ಸಿಕ್ಕಿಲ್ಲ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದೂ ಅವರು ಹೇಳಿದರು.

‘ಲಕ್ಷ್ಮಿ ನೇಣು ಹಾಕಿಕೊಂಡಿಲ್ಲ. ಇದೊಂದು ನಿಗೂಢ ಸಾವು. ತನಿಖೆ ಮಾಡಿ’ ಎಂದು ನಿವೃತ್ತ ಕೆಎಎಸ್ ಅಧಿಕಾರಿಯೂ ಆಗಿರುವ ತಂದೆ ವೆಂಕಟೇಶ್‌ ದೂರು ನೀಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತಂದೆ ದೂರು ಆಧರಿಸಿ, ಸ್ನೇಹಿತ ಮನೋಹರ್ ಹಾಗೂ ಆತನ ಆಪ್ತರಾದ ಪ್ರಜ್ವಲ್, ವಸಂತ್, ರಂಜಿತ್‌ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

‘ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಷ್ಮಿ, 2014ನೇ ಬ್ಯಾಚ್‌ ಅಧಿಕಾರಿ. ತರಬೇತಿ ಮುಗಿಸಿ ಸಿಐಡಿಯಲ್ಲಿ ಕೆಲಸ ಆರಂಭಿಸಿದ್ದರು. ಹೈದರಾಬಾದ್‌ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನವೀನ್ ಎಂಬುವರನ್ನು ಪ್ರೀತಿಸಿ 2012ರಲ್ಲಿ ಲಕ್ಷ್ಮಿ ಮದುವೆಯಾಗಿದ್ದರು’ ಎಂದೂ ಅಧಿಕಾರಿ ಹೇಳಿದರು.

ಊರಿಗೆ ಹೋಗಿದ್ದ ಪತಿ: ‘ಎರಡು ದಿನಗಳ ಹಿಂದಷ್ಟೇ ನವೀನ್‌, ಕೆಲಸ ನಿಮಿತ್ತ ಊರಿಗೆ ಹೋಗಿದ್ದರು. ಹೀಗಾಗಿ, ಗುತ್ತಿಗೆದಾರನೂ ಆಗಿರುವ ಸ್ನೇಹಿತ ಮನೋಹರ್ ಮನೆಗೆ ಹೋಗಿದ್ದ ಲಕ್ಷ್ಮಿ ಬುಧವಾರ ರಾತ್ರಿ ಪಾರ್ಟಿ ಮಾಡಿದ್ದರು. ಅದಾದ ನಂತರ ಪ್ರತ್ಯೇಕ ಕೊಠಡಿಗೆ ಹೋಗಿ ಮಲಗಿದ್ದರು. ಅದೇ ಕೊಠಡಿಯಲ್ಲೇ ಮೃತದೇಹ ಸಿಕ್ಕಿದೆ. ಈ ಸಂಗತಿ ವೆಂಕಟೇಶ್ ಅವರು ನೀಡಿರುವ ದೂರಿನಲ್ಲಿದೆ. ಘಟನಾ ಸ್ಥಳದಲ್ಲಿ ಯಾವುದೇ ಮರಣಪತ್ರವೂ ಸಿಕ್ಕಿಲ್ಲ’ ಎಂದೂ ತಿಳಿಸಿದರು.

‘ಕಾಲುನೋವು ಸಂಬಂಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಲಕ್ಷ್ಮಿ, ದೀರ್ಘ ರಜೆ ಪಡೆದಿದ್ದರು. ತಿಂಗಳ ಹಿಂದಷ್ಟೇ ಕೆಲಸಕ್ಕೆ ಹಾಜರಾಗಿದ್ದರು. ಕೌಟುಂಬಿಕ ಅಥವಾ ಕೆಲಸದ ವಿಷಯದಲ್ಲಿ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ’ ಎಂದೂ ಅಧಿಕಾರಿಯೊಬ್ಬರು ಹೇಳಿದರು.

‘ಮಗಳ ಸಂಸಾರ ಚೆನ್ನಾಗಿತ್ತು’
‘ಮಗಳ ಸಂಸಾರ ಚೆನ್ನಾಗಿತ್ತು. ಎರಡು ದಿನಗಳ ಹಿಂದಷ್ಟೇ ಅಳಿಯ ನವೀನ್ ಹೈದರಾಬಾದ್‌ಗೆ ಹೋಗಿದ್ದರು. ಅದಕ್ಕೆ ಬೇಸರವಾಗಿದ್ದರೆ, ಹೊರತು ಖಿನ್ನತೆಗೆ ಒಳಗಾಗಿರಲಿಲ್ಲ’ ಎಂದು ತಂದೆ ವೆಂಕಟೇಶ್‌ ಸುದ್ದಿಗಾರರಿಗೆ ಹೇಳಿದರು.

‘ಪುತ್ರಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳ್ಳಲ್ಲ. ಕಿಟಕಿಯ ಸರಳಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಸುಳ್ಳು. ಆಕೆಯ ಕಾಲು ನೆಲಕ್ಕೆ ಮುಟ್ಟುವಂತಿದೆ. ಹೀಗಾಗಿ, ಸಾವಿನ ವಿಚಾರದಲ್ಲಿ ಮನು ಮತ್ತು ಪ್ರಜ್ವಲ್ ಮೇಲೆ ಅನುಮಾನವಿದೆ’ ಎಂದೂ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.