ADVERTISEMENT

ಲೋಹದ ಹಕ್ಕಿಗಳ ಡಾಕ್ಟ್ರು!: ಮೊದಲ ಮಹಿಳಾ ವಿಮಾನ ಎಂಜಿನಿಯರ್‌ ಹೀನಾ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 20:00 IST
Last Updated 15 ಫೆಬ್ರುವರಿ 2019, 20:00 IST
ಹೀನಾ ಜೈಸ್ವಾಲ್‌
ಹೀನಾ ಜೈಸ್ವಾಲ್‌   

ಬೆಂಗಳೂರು: ಭಾರತೀಯ ವಾಯುಸೇನೆಯ ಮೊದಲ ಮಹಿಳಾ ವಿಮಾನ ಎಂಜಿನಿಯರ್‌ ಆಗಿ ಫ್ಲೈಟ್‌ ಲೆಫ್ಟಿನೆಂಟ್‌ ಹೀನಾ ಜೈಸ್ವಾಲ್‌ ಆಯ್ಕೆಯಾಗಿದ್ದಾರೆ.

ಯಲಹಂಕದ ಭಾರತೀಯ ವಾಯುನೆಲೆಯ 112 ಹೆಲಿಕಾಪ್ಟರ್‌ ಘಟಕದಲ್ಲಿ 2015ರ ಜನವರಿಯಲ್ಲಿ ಸೇರಿದ್ದ ಅವರು ಪ್ರಸಕ್ತ ವರ್ಷ ಎಂಜಿನಿಯರಿಂಗ್‌ ಕೋರ್ಸನ್ನು ಪೂರ್ಣಗೊಳಿಸಿದರು. ಬಳಿಕ ಆರು ತಿಂಗಳ ಕಠಿಣ ತರಬೇತಿ ಪಡೆದು ಮೊದಲ ಮಹಿಳಾ ವಿಮಾನ ಎಂಜಿನಿಯರ್‌ ಆಗಿ ಗುರುತಿಸಿಕೊಂಡು ಇತಿಹಾಸ ಸೃಷ್ಟಿಸಿದ್ದಾರೆ.

ಇದಕ್ಕೂ ಮುನ್ನ ಫೈರಿಂಗ್ ತಂಡದ ಮುಖ್ಯಸ್ಥರಾಗಿ, ಕ್ಷಿಪಣಿ ಪಡೆಯ ಮುಂಚೂಣಿಯ ಬ್ಯಾಟರಿ ಕಮಾಂಡರ್‌ ಆಗಿ ಅವರು ಸೇವೆ ಸಲ್ಲಿಸಿದ್ದರು. ಫೆ. 15ರಂದು ಅವರು ಈ ವಿಮಾನ ಎಂಜಿನಿಯರಿಂಗ್‌ ಕೋರ್ಸ್‌ ಪೂರ್ಣಗೊಳಿಸಿ ಎಂಜಿನಿಯರ್ಸ್‌ ವಿಭಾಗಕ್ಕೆ ಸೇರಿಕೊಂಡಿದ್ದಾರೆ.

ADVERTISEMENT

6 ತಿಂಗಳ ತರಬೇತಿ ಅವಧಿಯಲ್ಲಿ ಪುರುಷ ಸಹೋದ್ಯೋಗಿಗಳಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸಿದ್ದಾರೆ. ಅವಿರತ ಪರಿಶ್ರಮ, ಬದ್ಧತೆ ಹಾಗೂ ಯಾವುದಕ್ಕೂ ಹಿಂಜರಿಕೆಯಿಲ್ಲದೇ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದರು.
ಚಂಡೀಗಡದ ಹೀನಾ ಅವರು ಡಿ.ಕೆ. ಜೈಸ್ವಾಲ್‌ ಮತ್ತು ಅನಿತಾ ಜೈಸ್ವಾಲ್‌ ಪುತ್ರಿ. ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿದರು. ‘ನಾನು ಬಾಲ್ಯದಿಂದಲೇ ಸೇನೆ ಸೇರುವ ಕನಸು ಕಂಡಿದ್ದೆ. ಈ ಕೋರ್ಸ್‌ ಯಶಸ್ವಿಯಾಗಿ ಪೂರ್ಣಗೊಳ್ಳುವ ಮೂಲಕ ಅದು ನನಸಾಗಿದೆ’ ಎಂದು ಹೀನಾ ಸಂತಸ ಹಂಚಿಕೊಂಡರು.

‘ಅವರನ್ನು ವಾಯುಸೇನೆಯ ಹೆಲಿಕಾಪ್ಟರ್‌ ಕಾರ್ಯಾಚರಣೆಯ ಘಟಕಗಳಿಗೆ ನೇಮಿಸಲಾಗುವುದು. ಹೆಚ್ಚು ಒತ್ತಡದ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಬೇಕಾದಾಗ ಅವರನ್ನು ಅಗತ್ಯವಿದ್ದ ಕಡೆ ಕರೆಸಿಕೊಳ್ಳಲಾಗುವುದು. ಹಿಮಾಚ್ಛಾದಿತ ಸಿಯಾಚಿನ್‌ನಿಂದ ಹಿಡಿದು ಅಂಡಮಾನ್‌ ಸುತ್ತಮುತ್ತಲಿನ ಸಾಗರ ಪ್ರದೇಶಗಳಲ್ಲಿಯೂ ಅವರು ಕಾರ್ಯನಿರ್ವಹಿಸಬೇಕಾಗುತ್ತದೆ. ಇಂಥ ಸವಾಲುಗಳನ್ನು ಎದುರಿಸಲು ಅವರು ಮುಕ್ತವಾಗಿ ಸಿದ್ಧರಿದ್ದಾರೆ’ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಕೆಲವು 8 ದಶಕಗಳಿಂದ ಭಾರತೀಯ ಸೇನೆಯಲ್ಲಿ ಮಹಿಳೆಯರೂ ಒಳಗೊಳ್ಳುವಂತಾಗಲು ಮಹತ್ವದ ಹೆಜ್ಜೆಯಿಟ್ಟಿದೆ. ವಾಯು ಸೇನೆಯಲ್ಲಿ 1993ರಿಂದ ಮಹಿಳೆಯರು ಅಧಿಕಾರಿಗಳಾಗಿ ವಿವಿಧ ಹುದ್ದೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2018ರವರೆಗೆ ಫ್ಲೈಟ್‌ ಎಂಜಿನಿಯರ್‌ ಶಾಖೆಯು ವಿಶೇಷವಾಗಿ ಪುರುಷ ವಾಯು ಸೈನಿಕರಿಗಾಗಿಯೇ ಮೀಸಲಾಗಿತ್ತು. ಅದೀಗ ಮಹಿಳಾ ಅಧಿಕಾರಿಗಳಿಗೂ ತೆರೆದಿದೆ.

ವಿಮಾನದ ಸಂಕೀರ್ಣ ವ್ಯವಸ್ಥೆಯ ಮೇಲೆ ನಿಗಾ ವಹಿಸುವುದು ಫ್ಲೈಟ್‌ ಎಂಜಿನಿಯರ್‌ನ ಕರ್ತವ್ಯ. ಇದಕ್ಕೆ ವಿಶೇಷ ಕೌಶಲ ಬೇಕಾಗುತ್ತದೆ. ವಿಮಾನ ಕಾರ್ಯಾಚರಣೆ ತಂಡದ ಪ್ರಮುಖ ಸದಸ್ಯರಾಗಿ ಅವರು ಕಾರ್ಯ ನಿರ್ವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.