ADVERTISEMENT

ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಗಲಾಟೆ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 9:22 IST
Last Updated 3 ಸೆಪ್ಟೆಂಬರ್ 2020, 9:22 IST
ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್‌ ಅವರ ಭಾವಚಿತ್ರ ಇಲ್ಲ ಎಂಬ ಆಕ್ರೋಶಕ್ಕೆ ಕಾರಣವಾದ ಕಾಂಗ್ರೆಸ್‌ ಪಕ್ಷದ ಬ್ಯಾನರ್‌.
ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್‌ ಅವರ ಭಾವಚಿತ್ರ ಇಲ್ಲ ಎಂಬ ಆಕ್ರೋಶಕ್ಕೆ ಕಾರಣವಾದ ಕಾಂಗ್ರೆಸ್‌ ಪಕ್ಷದ ಬ್ಯಾನರ್‌.   

ಚಿತ್ರದುರ್ಗ: ಕಾಂಗ್ರೆಸ್ ಗುರುವಾರ ಹಮ್ಮಿಕೊಂಡಿದ್ದ ‘ಆರೋಗ್ಯ ಹಸ್ತ’ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ. ಜಿ.ಪರಮೇಶ್ವರ್ ಅವರ ಭಾವಚಿತ್ರ ಹಾಕಿಲ್ಲ ಎಂಬ ವಿಚಾರಕ್ಕೆ ವ್ಯಕ್ತವಾದ ಆಕ್ಷೇಪ ಗಲಾಟೆಯ ಸ್ವರೂಪ ಪಡೆಯಿತು.

ಇಲ್ಲಿನ ಉಮಾಪತಿ ಛತ್ರದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಎಚ್.ಆಂಜನೇಯ ಅವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಪ್ರಾಸ್ತಾವಿಕವಾಗಿ ಮಾತನಾಡಲು ಮುಂದಾದಾಗ ಲಿಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಓ.ಶಂಕರ್ ಮೈಕ್ ಕಿತ್ತುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಮುದಾಯದ ನಾಯಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಇದಕ್ಕೆ ಇತರ ಸದಸ್ಯರು ವಿರೋಧಸಿದಾಗ ಗದ್ದಲ ಜೋರಾಯಿತು. ಕೆಪಿಸಿಸಿ ಪ್ರತಿನಿಧಿಯಾಗಿ ಸಭೆಯ ವೇದಿಕೆಯ ಮೇಲಿದ್ದ ಮಾಜಿ ಸಂಸದರಾದ ಆರ್.ಧ್ರುವನಾರಾಯಣ್ ಹಾಗೂ ಬಿ.ಎನ್.ಚಂದ್ರಪ್ಪ ಅವರು ಮೌನವಾಗಿದ್ದರು.

ADVERTISEMENT

‘ಕಾರ್ಯಕ್ರಮದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ತಪ್ಪು. ಏನೇ ಆಕ್ಷೇಪ ಇದ್ದರೂ ಕಾಂಗ್ರೆಸ್ ಕಚೇರಿಗೆ ಬನ್ನಿ. ನಿಮ್ಮ ಸಲಹೆ ಪಡೆಯಲು ನಾವು ಸಿದ್ಧರಿದ್ದೇವೆ. ಹೀಗೆ ಗೊಂದಲ ಸೃಷ್ಟಿಸಬೇಡಿ’ ಎಂದು ಎಂ.ಕೆ.ತಾಜ್‌ಪೀರ್ ಮನವಿ ಮಾಡಿದರು. ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.