ADVERTISEMENT

ಜಾತಿಗಣತಿಯಲ್ಲಿ ಒಳ ಪಂಗಡಗಳ ಹೆಸರನ್ನೂ ಸ್ಪಷ್ಟವಾಗಿ ನಮೂದಿಸಿ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 7 ಮೇ 2025, 18:33 IST
Last Updated 7 ಮೇ 2025, 18:33 IST
   

ಲಕ್ಷ್ಮೇಶ್ವರ (ಗದಗ ಜಿಲ್ಲೆ): ಜಾತಿಗಣತಿಯಲ್ಲಿ ಹಿಂದೂ ಧರ್ಮದ ಜತೆಗೆ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳ ಹೆಸರನ್ನೂ ಸ್ಪಷ್ಟವಾಗಿ ನಮೂದಿಸಬೇಕು ಎಂದು ರಂಭಾಪುರಿ ಶ್ರೀಗಳು ಕರೆ ನೀಡಿದರು.

ಲಕ್ಷ್ಮೇಶ್ವರದ ಮುಕ್ತಿ ಮಂದಿರದಲ್ಲಿ ಬುಧವಾರ ನಡೆದ ಪಂಚಾಚಾರ್ಯರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಗ್ಗೆ ಹೊಸ ಕಾಲಂ ಸೃಷ್ಟಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ADVERTISEMENT

ವೀರಶೈವ ಲಿಂಗಾಯತ ದೊಡ್ಡ ಸಮಾಜ. ಆದರೆ ಇಂದು ಹರಿದು ಹಂಚಿ ಹೋಗಿದೆ. ಅದನ್ನು ಒಗ್ಗೂಡಿಸಲು ಪ್ರಯತ್ನ ನಡೆದಿದೆ. ಭಿನ್ನಾಭಿಪ್ರಾಯಗಳು ಹಿತಕರವಲ್ಲ. ಎಲ್ಲ ಪೀಠಗಳಿಗೆ ಪತ್ರ ಕಳಿಸಲಾಗಿತ್ತು. ಅದಕ್ಕೆ ಎಲ್ಲ ಪೀಠಾಧೀಶರು ಒಪ್ಪಿ ಬಂದಿದ್ದು ಆನಂದವಾಗಿದೆ ಎಂದರು.

ಪೂರ್ವದ ಹೆಸರು ವೀರಶೈವ. ಆದರೆ ಲಿಂಗಾಯತ ರೂಢಿಯಿಂದ ಬಂದಿದೆ. ವೀರಶೈವದ ಜೊತೆಗೆ ಲಿಂಗಾಯತ ಸೇರಿಸಲು ಹಿಂದೆ ನಿರ್ಧರಿಸಲಾಗಿತ್ತು. ಆದರೆ ಕೆಲವರು ವೀರಶೈವ ಬಿಟ್ಡು ಲಿಂಗಾಯತ ಉಳಿಸಿಕೊಳ್ಳಲು ಹೇಳಿರುವುದು ವಿಷಾದನೀಯ ಎಂದರು.

ಧರ್ಮವನ್ನು ಒಡೆದು ರಾಜಕೀಯ ಮಾಡಬಾರದು. ಆಶ್ರಯ ಕೊಟ್ಟ ವೀರಶೈವವನ್ನು ಕಡೆಗಣಿಸಿದ್ದು ತಪ್ಪು. ಬಸವಣ್ಣನವರು ಈ ವೀರಶೈವ ಧರ್ಮವನ್ನು ಅಪ್ಪಿಕೊಂಡಿದ್ದಾರೆ. ಆದರೆ ಇವತ್ತು ಬಸವಣ್ಣನವರ ಹೆಸರಿನಲ್ಲಿ ಹೇಳುವ ಜನರು ವೀರಶೈವ ಬೇರೆ. ಲಿಂಗಾಯತ ಬೇರೆ ಎಂದು ಹೇಳುತ್ತಿದ್ದಾರೆ. ವೀರಶೈವ ಧರ್ಮ ಎಲ್ಲ ಜಾತಿಯವರಿಗೆ ಒಳ್ಳೆಯದನ್ನು ಮಾಡಿದೆ. ವೀರಶೈವ ಧರ್ಮದ ಹೆಸರಲ್ಲಿ ಮೇಲೆ ಬಂದವರು ಈಗ ಅದನ್ನೆ ವಿರೋಧಿಸುತ್ತಿರುವುದು ಖೇದದ ಸಂಗತಿಯಾಗಿದೆ ಎಂದರು.

ನರೇಂದ್ರ ಮೋದಿಯವರು ಜನಗಣತಿಯೊಂದಿಗೆ ಜಾತಿಗಣತಿಗೆ ಮುಂದಾಗಿದ್ದು ಸ್ವಾಗತಾರ್ಹ. ಅಖಿಲ ಭಾರತ ವೀರಶೈವ ಮಹಾಸಭೆ ಇದಕ್ಕೆ ಒಪ್ಪಿದೆ ಎಂದರು.

ಚಿನ್ನಪ್ಪರೆಡ್ಡಿ, ಹಾವನೂರು ಮತ್ತು ಕಾಂತರಾಜು ವರದಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಹಲವು ಗೊಂದಲಗಳನ್ನು ಸೃಷ್ಟಿಸುವ ಮೂಲಕ ವೀರಶೈವ ಲಿಂಗಾಯತರನ್ನು ಇಬ್ಬಾಗ ಮಾಡಲಾಗುತ್ತಿದೆ. ಕಾಂತರಾಜು ವರದಿಯಲ್ಲಿ 4.5 ಕೋಟಿ ಜನರನ್ನು ಸಂಪರ್ಕಿಸಲಾಗಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ಇನ್ನೂ 2.5 ಕೋಟಿ ಜನರ ಸಮೀಕ್ಷೆ ನಡೆದಿಲ್ಲ. ಒಳಮೀಸಲಾತಿ ನೀಡಲು ಪರಿಶಿಷ್ಟ ಜಾತಿ ಒಳಮೀಸಲು ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ, ಕಾಂತರಾಜು ವರದಿಯಲ್ಲಿ ಈಗಾಗಲೇ ಜಾತಿಗಣತಿ ಮಾಡಿದ್ದರಿಂದ ಪ್ರತ್ಯೇಕ ಒಳಮೀಸಲು ಗಣತಿ ಏಕೆ ಎಂದು ಪ್ರಶ್ನಿಸಿದರು. ಸರ್ಕಾರ ಜಾತಿಗಣತಿ ವರದಿಯನ್ನು ಸ್ವೀಕರಿಸಬಾರದು ಎಂದು ಆಗ್ರಹಿಸಿದರು.

ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಿ ಅಂತಿಮ ನಿರ್ಣಯಕ್ಕೆ ಬರುವುದು ಹಾಗೂ ವೀರಶೈವ ಲಿಂಗಾಯತ ಮಹಾಸಭಾ ಸಂಸ್ಥೆಯಿಂದ ಪ್ರತ್ಯೇಕ ಗಣತಿ ಮಾಡಿಸಲು ನಿರ್ಣಯಿಸಲಾಯಿತು.

ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.