ADVERTISEMENT

ಜುಲೈ 2 ನೇ ವಾರದಿಂದ ಮೋಡ ಬಿತ್ತನೆ

ಮೈಸೂರು– ಹುಬ್ಬಳ್ಳಿಯಲ್ಲಿ ಕೇಂದ್ರಗಳ ಸ್ಥಾಪನೆ: ಪೂರ್ವ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 20:00 IST
Last Updated 28 ಜೂನ್ 2019, 20:00 IST
   

ಬೆಂಗಳೂರು: ಮಳೆ ಕೊರತೆಯಿಂದಾಗಿ ಕುಡಿಯುವ ನೀರಿಗೆ ಅಭಾವ ಮತ್ತು ಕೃಷಿ ಚಟುವಟಿಕೆಗೆ ತೊಂದರೆ ಆಗಿರುವುದರಿಂದ ಜುಲೈ ಎರಡನೇ ವಾರದಿಂದಲೇ ರಾಜ್ಯದಾದ್ಯಂತ ಮೋಡ ಬಿತ್ತನೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

‘ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಯಿತು. ಕೇಂದ್ರ ಸರ್ಕಾರದ ಅನುಮತಿ ಕೋರಿ ರಾಜ್ಯ ಸರ್ಕಾರ ಮೇ ತಿಂಗಳಿನಲ್ಲೇ ಪತ್ರ ಬರೆದಿತ್ತು. ಈವರೆಗೂ ಅನುಮತಿ ಸಿಕ್ಕಿಲ್ಲ. ಆದರೂ ಜುಲೈ ಎರಡನೇ ವಾರದಿಂದ ಮೋಡ ಬಿತ್ತನೆಗಾಗಿ ಪೂರ್ವ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಈ ಬಾರಿ ಮೋಡ ಬಿತ್ತನೆಗೆ ಎರಡು ಕೇಂದ್ರಗಳಿರುತ್ತವೆ. ದಕ್ಷಿಣ ಕರ್ನಾಟಕದಲ್ಲಿ ಬೆಂಗಳೂರಿನ ಬದಲಿಗೆ ಮೈಸೂರು ಕೇಂದ್ರ ಸ್ಥಾನವಾಗಿರುತ್ತದೆ.ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ ಕೇಂದ್ರವಾಗಿರುತ್ತದೆ. ವಿದೇಶದಿಂದ ರೆಡಾರ್‌ಗಳನ್ನು ತರಿಸಲು ಮತ್ತು ಮೋಡ ಬಿತ್ತನೆಗೆ ಬಳಸುವ ವಿಮಾನಗಳ ಮಾದರಿಯನ್ನು ಪರಿಷ್ಕರಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಬೆಂಗಳೂರಿನಲ್ಲಿ ಎಚ್‌ಎಎಲ್‌, ಯಲಹಂಕದ ವಾಯುಪಡೆ ನೆಲೆ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇವೆ. ಮೂರು ವೈಮಾನಿಕ ಸಂಚಾರ ನಿಯಂತ್ರಣ (ಎಟಿಸಿ) ಸಂಸ್ಥೆಗಳು ವೈಮಾನಿಕ ಸಂಚಾರವನ್ನು ನಿಯಂತ್ರಿಸುತ್ತವೆ. ಬೆಂಗಳೂರಿನಲ್ಲಿ ವಿಮಾನ ಸಂಚಾರದ ಒತ್ತಡ ಅಧಿಕವಾಗಿರುವದರಿಂದಮೋಡ ಬಿತ್ತನೆ ವಿಮಾನದ ಹಾರಾಟಕ್ಕೆ ಪದೇ ಪದೇ ತೊಂದರೆ ಆಗುತ್ತದೆ. ಮೋಡ ಬರುವುದನ್ನು ಕಾದುಕೊಂಡು ಆ ಸಮಯಕ್ಕೆ ಸರಿಯಾಗಿ ವಿಮಾನದ ಹಾರಾಟ ನಡೆಸಬೇಕು. ಆದರೆ, ಆ ಸಮಯದಲ್ಲಿ ಹಾರಾಟಕ್ಕೆ ಅವಕಾಶ ನೀಡದೇ ನಿರ್ಬಂಧ ವಿಧಿಸುವ ಸಾಧ್ಯತೆಯೂ ಇರುತ್ತದೆ. ಮೈಸೂರಿನಲ್ಲಿ ಈ ಸಮಸ್ಯೆ ಇರುವುದಿಲ್ಲ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಎರಡೂ ಕೇಂದ್ರಗಳಿಂದ ಏಕ ಕಾಲದಲ್ಲಿ ಮೋಡ ಬಿತ್ತನೆ ನಡೆಸಲಾಗುವುದು. ಇದರಿಂದ ರಾಜ್ಯದ ಎಲ್ಲ ಕಡೆಗಳಲ್ಲೂ ಮೋಡ ಬಿತ್ತನೆಗೆ ಅವಕಾಶ ಸಿಕ್ಕಿದಂತಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬೆಳೆ ಸಮೀಕ್ಷೆಗೆ ನಿರ್ಧಾರ

ರಾಜ್ಯದ 2.20 ಕೋಟಿ ರೈತರ ಹೊಲಗಳಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ವಿವಿಧ ಬೆಳೆಗಳ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ಕೆ ₹90 ಕೋಟಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಬೆಳೆ ಸಮೀಕ್ಷೆಯನ್ನು ಜಿಪಿಎಸ್‌ ಆಧರಿಸಿದ ಮೊಬೈಲ್‌ ಆ್ಯಪ್‌ ಮೂಲಕ ನಡೆಸಲಾಗುವುದು. ಪ್ರತಿಯೊಬ್ಬ ರೈತನ ಹೊಲಕ್ಕೆ ತೆರಳಿ, ಬೆಳೆದು ನಿಂತ ಬೆಳೆಯನ್ನು ವೀಕ್ಷಿಸಿ ರೈತನ ಸಮೇತ ಚಿತ್ರವನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಇದರಿಂದ ಪ್ರತಿಯೊಂದು ಬೆಳೆಯ ನಿಖರ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.

ಈ ಸಮೀಕ್ಷೆಯಿಂದ ಬೆಳೆಯ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತದೆ. ಇಲ್ಲಿಯವರೆಗೆ ಸರಿಯಾದ ಮಾಹಿತಿ ಇರುತ್ತಿರಲಿಲ್ಲ. ಬರ ಅಥವಾ ಅತಿವೃಷ್ಟಿಯಿಂದ ಕೇಂದ್ರಕ್ಕೆ ಮನವಿ ಸಲ್ಲಿಸುವಾಗ ಮಾಹಿತಿಯಲ್ಲಿ ವ್ಯತ್ಯಾಸವಾಗುತ್ತಿತ್ತು. ಬೆಳೆ ವಿಮೆಗೆ ಅರ್ಜಿ ಹಾಕುವಾಗ ನಷ್ಟ ಸಂಭವಿಸಿದವರೂ, ಬೆಳೆ ಬೆಳೆಯದವರೂ ಅರ್ಜಿಗಳನ್ನು ಸಲ್ಲಿಸುತ್ತಿದ್ದರು. ಇಬ್ಬರಿಗೂ ಹಣ ಸಂದಾಯವಾಗುತ್ತಿತ್ತು. ಇನ್ನು ಮುಂದೆ ಅದಕ್ಕೆ ಕಡಿವಾಣ ಹಾಕಬಹುದು ಎಂದರು.

‘ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಯುವ ಜನತೆಯನ್ನು ಬೆಳೆ ಸಮೀಕ್ಷೆ ಕಾರ್ಯಕ್ಕೆ ಬಳಸಿಕೊಳ್ಳುತ್ತೇವೆ. ಒಂದು ಪ್ಲಾಟ್‌ನ ಸಮೀಕ್ಷೆ ಮಾಡಿದರೆ ಅವರಿಗೆ ₹10 ನೀಡಲಾಗುವುದು. ಪ್ರತಿ ದಿನ 50 ಪ್ಲಾಟ್‌ಗಳನ್ನು ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಇದಕ್ಕೆ ಸುಮಾರು ₹90 ಕೋಟಿ ಬೇಕಾಗುತ್ತದೆ. ಅದನ್ನು ಭರಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.