ADVERTISEMENT

ವಿಪಕ್ಷ ಸ್ಥಾನ: ಸಿದ್ದರಾಮಯ್ಯ, ಎಚ್ಕೆ ನಡುವೆ ಪೈಪೋಟಿ

ಅಭಿಪ್ರಾಯ ಸಂಗ್ರಹಿಸಲಿರುವ ಮಧುಸೂದನ ಮಿಸ್ತ್ರಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 19:38 IST
Last Updated 4 ಅಕ್ಟೋಬರ್ 2019, 19:38 IST
ಸಿದ್ದರಾಮಯ್ಯ , ಎಚ್.ಕೆ.ಪಾಟೀಲ
ಸಿದ್ದರಾಮಯ್ಯ , ಎಚ್.ಕೆ.ಪಾಟೀಲ   

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಹಾಗೂ ಎಚ್.ಕೆ.ಪಾಟೀಲ ನಡುವೆ ಪೈಪೋಟಿ ಆರಂಭವಾಗಿದ್ದು, ಅಧಿಕಾರ
ಕ್ಕಾಗಿ ಇಬ್ಬರೂ ಪ್ರಯತ್ನ ಆರಂಭಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನಕ್ಕೂ ಮುನ್ನ ವಿಪಕ್ಷ ನಾಯಕನ ನೇಮಕಕ್ಕೆ ಹೈಕಮಾಂಡ್ ಮುಂದಾಗಿದ್ದು, ಪಕ್ಷದಲ್ಲಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

ದಿಢೀರ್ ಬೆಳವಣಿಗೆಯಲ್ಲಿ ಪಾಟೀಲ ಶುಕ್ರವಾರ ದೆಹಲಿಗೆ ತೆರಳಿ ಪಕ್ಷದ ಹಿರಿಯ ಮುಖಂಡರ ಜತೆಗೆ ಸಮಾಲೋಚನೆ ನಡೆಸಿದರು. ರಾಜ್ಯದ ಹಿರಿಯ ಮುಖಂಡರೊಂದಿಗೆ ದೆಹಲಿ ನಾಯಕರನ್ನು ಭೇಟಿಯಾಗಿದ್ದು, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ADVERTISEMENT

ಪಕ್ಷದ ಹಿರಿಯ ಮುಖಂಡರ ನೇತೃತ್ವದ ಒಂದು ಬಣ ಎಚ್.ಕೆ.ಪಾಟೀಲ ಬೆಂಬಲಕ್ಕೆ ನಿಂತಿದ್ದರೆ, ಮತ್ತೊಂದು ಬಣ ಸಿದ್ದರಾಮಯ್ಯ ಪರವಾಗಿ ಲಾಬಿ ಮಾಡುತ್ತಿದೆ. ವಿರೋಧ ಪಕ್ಷದ ನಾಯಕನ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಪ್ರತ್ಯೇಕಿಸಿ ಇಬ್ಬರಿಗೆ ಅಧಿಕಾರ ನೀಡಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ದೂರವಿಟ್ಟರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬುದನ್ನು ಮನಗಂಡಿರುವ ಹೈಕಮಾಂಡ್, ಅವರಿಗೂ ಪಕ್ಷದಲ್ಲಿ ಸ್ಥಾನಮಾನ ನೀಡುವ ಮೂಲಕ ಇತರರಿಗೂ ಅವಕಾಶ ಕಲ್ಪಿಸಲು ಚಿಂತನೆ
ನಡೆಸಿದೆ.

ಈಗ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿದ್ದು, ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವುದು. ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಾಟೀಲ ಅವರಿಗೆ ನೀಡುವ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಅವಕಾಶ ನೀಡಿ, ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಬಗ್ಗೆಚರ್ಚೆಗಳು ನಡೆದಿವೆ ಎಂದುಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಪರವಾಗಿಯೂ ಚಟುವಟಿಕೆಗಳು ಬಿರುಸು ಪಡೆದುಕೊಂಡಿದ್ದು, ಕಳೆದ ಎರಡು ದಿನಗಳಿಂದ ತಮ್ಮ ಬೆಂಬಲಿಗರ ಜತೆಗೆ ಸಮಾಲೋಚನೆ ನಡೆಸಿದ್ದಾರೆ. ವಿಪಕ್ಷ ನಾಯಕನ ಸ್ಥಾನ ಸಿಗದಿದ್ದರೆ ಏನು ಮಾಡಬೇಕು? ಎಂದು ಸಲಹೆ ಪಡೆದುಕೊಂಡಿದ್ದಾರೆ. ಜತೆಗೆ ಹೈಕಮಾಂಡ್ ಭೇಟಿಗೆ ಅವಕಾಶ ಸಿಗದಿರುವುದು ಅವರ ಆತಂಕವನ್ನು ಹೆಚ್ಚಿಸಿದ್ದು, ಬೆಂಬಲಿಗರು ಸಮಾಧಾನ ಮಾಡಿದ್ದಾರೆ.

‘ಮಹಾರಾಷ್ಟ್ರ ಮಾದರಿಯಲ್ಲಿ ವಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಪ್ರತ್ಯೇಕಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯ ಸಚೇತಕರನ್ನು ಶೀಘ್ರವೇ ನೇಮಕ ಮಾಡಲಿದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.

ಅಧಿವೇಶನಕ್ಕೆ ಮುನ್ನ ಹೆಸರು

ನಗರಕ್ಕೆ ಭೇಟಿ ನೀಡಲಿರುವ ಹಿರಿಯ ಮುಖಂಡ ಮಧುಸೂದನ ಮಿಸ್ತ್ರಿ, ಭಾನುವಾರ ಪಕ್ಷದ ಪ್ರಮುಖರ ಸಭೆ ನಡೆಸಲಿದ್ದಾರೆ. ವಿಪಕ್ಷ ನಾಯಕ, ಮುಖ್ಯ ಸಚೇತಕರ ನೇಮಕದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧವೂ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಸಭೆಯಲ್ಲಿ ಬರುವ ಅಭಿಪ್ರಾಯಗಳನ್ನು ಕ್ರೂಡೀಕರಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಲಿದ್ದಾರೆ. ಅಧಿವೇಶನಕ್ಕೆ ಮುನ್ನ ಹೆಸರು ಪ್ರಕಟಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.