ADVERTISEMENT

ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 6:59 IST
Last Updated 5 ಜುಲೈ 2022, 6:59 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: 'ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ. ಅವರು (ಕಾಂಗ್ರೆಸ್) ಅಧಿಕಾರದಲ್ಲಿ ಇದ್ದಿದ್ದರೆ ಈ ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದ ಅನುಮಾನ ಬಂದ ತಕ್ಷಣ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಅವರು ಈ ವಿಚಾರದಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದರು.

‘ಪಿಎಸ್‌ಐ ಪ್ರಕರಣದಲ್ಲಿ ಗೃಹಸಚಿವರ ರಾಜೀನಾಮೆಗೆ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಆದರೆ, ಅವರ ಕಾಲದಲ್ಲೂ ಪಿಎಸ್​ಐ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಹಿರಿಯ ಅಧಿಕಾರಿ ಆರೋಪಿಯಾಗಿದ್ದರು. ಆದರೆ, ಆಗ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ’ ಎಂದರು.

ADVERTISEMENT

‘ವ್ಯವಸ್ಥೆ ಸ್ವಚ್ಛ ಮಾಡಲು ನಾವು ಮುಂದಾಗಿದ್ದೇವೆ. ಗೃಹ ಸಚಿವರ ದಕ್ಷತೆ, ಪ್ರಾಮಾಣಿಕತೆಯಿಂದಲೇ ಹಲವರ ಬಂಧನವಾಗಿದೆ’ ಎಂದೂ ಅವರು ಹೇಳಿದರು.

ಕಾಂಗ್ರೆಸ್ ಪ್ರಕರಣ ಮುಚ್ಚಿ ಹಾಕುತ್ತಿತ್ತು: ‘ನಾವು ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಇದ್ದಿದ್ದರೆ ವ್ಯವಸ್ಥಿತವಾಗಿ ಇಡೀ ಪ್ರಕರಣವನ್ನು ಮುಚ್ಚಿ ಹಾಕುತ್ತಿತ್ತು. ಪ್ರಕರಣದ ಬಗ್ಗೆ ಅನುಮಾನ ಬಂದ ಕೂಡಲೇ ಗೃಹ ಸಚಿವರು ಎಫ್​​ಎಸ್​ಎಲ್ ವರದಿ ತರಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದರು. ಬಳಿಕ ಸಿಐಡಿಗೆ ಕೊಡಿ ಎಂದು ನಾನು ಆದೇಶಿಸಿದೆ. ಪ್ರಕರಣದಲ್ಲಿ ಬಂಧಿಸಿರುವ 50 ಆರೋಪಿಗಳಲ್ಲಿ 20 ಪೊಲೀಸ್ ಅಧಿಕಾರಿಗಳಿದ್ದಾರೆ‘ ಎಂದು ಮುಖ್ಯಮಂತ್ರಿ ಹೇಳಿದರು.

ಪ್ರತಿಭಟನೆಗೆ ಮುಖ್ಯಮಂತ್ರಿ ಗರಂ: ‘ಶಾಸಕ ಜಮೀರ್ ಅಹ್ಮದ್ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟು ಮಾಡುತ್ತಿರುವುದರ ಹಿಂದೆ ಕಾಂಗ್ರೆಸ್ ಕುಮ್ಮಕ್ಕಿದೆ‘ ಎಂದು ಮುಖ್ಯಮಂತ್ರಿ ಹೇಳಿದರು.

‘ಹೈಕೋರ್ಟ್ ಛೀಮಾರಿ ಹಾಕಿತು ಎಂಬ ಕಾರಣಕ್ಕೆ ಎಸಿಬಿ ದಾಳಿ ನಡೆದಿಲ್ಲ. ದಾಖಲೆ ಆಧರಿಸಿ ಕ್ರಮ ತೆಗೆದುಕೊಂಡಿದ್ದಾರೆ‘ ಎಂದ ಮುಖ್ಯಮಂತ್ರಿ, ಸಿಐಡಿ ಮತ್ತು ಎಸಿಬಿ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪರಪ್ಪನ ಅಗ್ರಹಾರ ಜೈಲಿಂದ ಹರ್ಷ ಕೊಲೆ ಆರೋಪಿಗಳು ವಿಡಿಯೊ ಕರೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಒಂದು ತಂಡ ಅಲ್ಲಿ ಅಪರಾಧಿಗಳ ಜೊತೆ ಶಾಮೀಲಾಗಿದೆ ಅನಿಸುತ್ತಿದೆ. ಇಂದೇ ಪರಪ್ಪನ ಅಗ್ರಹಾರ ಪ್ರಕರಣ ಸಂಬಂಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಕುಮಾರಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ‘ಗಾಳಿಯಲ್ಲಿ ಗುಂಡು ಹೊಡೆಯುವ ರೀತಿಯಲ್ಲಿ ಮಾತನಾಡಿದರೆ ಆಗುವುದಿಲ್ಲ. ಅವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅದರ ಬದಲು ಕಿಂಗ್ ಪಿನ್ ಯಾರು ಅಂತ ಹೇಳಲಿ’ ಎಂದು ತಿಳಿಸಿದರು.

ಪೌರ ಕಾರ್ಮಿಕರ ಕಾಯಂಮಾತಿ: ‘ಪೌರ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಅವರ ವೇತನ ತಾರತಮ್ಯ ಕುರಿತು ಕ್ರಮ ತೆಗೆದುಕೊಳ್ಳುತ್ತೇವೆ. ಬೇರೆ ರಾಜ್ಯಗಳಲ್ಲಿ ಮಾಡಿಲ್ಲ. ಕರ್ನಾಟಕದಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ’ ಎಂದರು.

ರಾಜ್ಯದ ಹಲವೆಡೆ ಮಳೆ ಮಾತನಾಡಿದ ಅವರು, ‘ವಿಪತ್ತು ನಿರ್ವಹಣೆ ದಳದ ಜೊತೆ ಸೋಮವಾರ ರಾತ್ರಿ ಚರ್ಚೆ ಮಾಡಿದ್ದೇನೆ. ಸಂತ್ರಸ್ತರಿಗೆ ಪರಿಹಾರ ಕೊಡಲು ಸೂಚಿಸಿದ್ದೇನೆ. ಮಳೆ ಹಾನಿ ಕುರಿತು ಜಿಲ್ಲಾಧಿಕಾರಿಗಳ ಜೊತೆಗೂ ಸಭೆ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.