ADVERTISEMENT

ಬಡ ವಿದ್ಯಾರ್ಥಿಗಳ ನೀಟ್‌, ಜೆಇಇ ಶುಲ್ಕ ಭರಿಸಲು ಚಿಂತನೆ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 4:35 IST
Last Updated 2 ಜೂನ್ 2022, 4:35 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಮಂಗಳೂರು: ‘ನೀಟ್, ಜೆಇಇ, ಸಿಇಟಿ ಬರೆಯುವ ಬಡ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಸರ್ಕಾರದಿಂದಲೇ ಭರಿಸುವ ಚಿಂತನೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ರೈತ ವಿದ್ಯಾನಿಧಿ ಪಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ, ರೈತ ವಿದ್ಯಾನಿಧಿಯ ಮೊತ್ತ ಹೆಚ್ಚಿಸಬೇಕು ಎಂಬ ವಿದ್ಯಾರ್ಥಿನಿಯ ಬೇಡಿಕೆಗೆ ಉತ್ತರಿಸಿದ ಅವರು, 'ಈ ವರ್ಷ ಮೊದಲ ಬಾರಿಗೆ ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳ ಫಲಿತಾಂಶ ಗಮನಿಸಿ, ಮೊತ್ತ ಹೆಚ್ಚಳಕ್ಕೆ ಯೋಚಿಸುತ್ತೇನೆ’ ಎಂದರು.

ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸದೊಂದು ತರಬೇತಿ ಯೋಜನೆ ಪ್ರಾರಂಭಿಸಲು ಸರ್ಕಾರ ಯೋಚಿಸಿದೆ. ಪರೀಕ್ಷೆ ಸಿದ್ಧತೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ, ಈ ವರ್ಷ ಬಜೆಟ್‌ನಲ್ಲಿ ಘೋಷಿಸಿದಂತೆ ‘ಮುಖ್ಯಮಂತ್ರಿ ಮಾರ್ಗದರ್ಶಿ’ ಆ್ಯಪ್ ಸಿದ್ಧಪಡಿಸಲಾಗಿದೆ. ₹ 10 ಕೋಟಿ ಮೊತ್ತ ಮೀಸಲಿಡಲಾಗಿದ್ದು, ಬೈಜೂಸ್ ಜತೆ ಸೇರಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.